ಬೆಂಗಳೂರು: ರಾಜ್ಯದಾದ್ಯಂತ ಮುಂದಿನ ವಾರದಿಂದ ಎನಿವೇರ್ ನೋಂದಣಿ ವ್ಯವಸ್ಥೆ ಜಾರಿಗೆ ಬರಲಿದೆ. ಸೆಪ್ಟೆಂಬರ್ ಮೊದಲ ವಾರದಿಂದಲೇ ರಾಜ್ಯಾದ್ಯಂತ ಬಯಸಿದ ಕಡೆ ಆಸ್ತಿ ರಿಜಿಸ್ಟ್ರೇಷನ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.
ಸಾರ್ವಜನಿಕರು ಸ್ಥಿರಾಸ್ತಿ ನೋಂದಣಿಗೆ ನಿರ್ದಿಷ್ಟ ನೋಂದಣಾಧಿಕಾರಿ ಕಚೇರಿಯನ್ನೇ ನೆಚ್ಚಿಕೊಳ್ಳದೆ ಸಮೀಪದ ಅಥವಾ ಬೇರೆ ಯಾವುದೇ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ನೋಂದಣಿ ಮಾಡಿಸಿಕೊಳ್ಳಬಹುದು. ಎನಿವೇರ್ ನೋಂದಣಿ ವ್ಯವಸ್ಥೆ ಸೆಪ್ಟೆಂಬರ್ ಮೊದಲ ವಾರದಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ.
ರಾಜ್ಯದಲ್ಲಿ 35 ಜಿಲ್ಲಾ ನೋಂದಣಿ ಕಚೇರಿ, 257 ಉಪ ನೋಂದಣಾಧಿಕಾರಿ ಕಚೇರಿಗಳಿವೆ. ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಬಯಸಿದ ದಿನ, ಸಮಯದಲ್ಲಿ ಸ್ಥಿರಾಸ್ತಿಯನ್ನು ನೋಂದಾಯಿಸಿಕೊಳ್ಳಬಹುದಾಗಿದೆ. 2011ರಲ್ಲಿ ಬೆಂಗಳೂರಿನನಲ್ಲಿ ಈ ಪ್ರಕ್ರಿಯೆ ಜಾರಿಯಾಗಿತ್ತು. ರಾಜ್ಯದಾದ್ಯಂತ ಈ ಯೋಜನೆಯನ್ನು ವಿಸ್ತರಿಸಲು ಕ್ರಮ ಕೈಗೊಳ್ಳುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸೂಚನೆ ನೀಡಿದ್ದರು. ಅಂತೆಯೇ ಬೆಂಗಳೂರು ಮತ್ತು ತುಮಕೂರಿನಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿತ್ತು. ಯಶಸ್ವಿಯಾದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ನೋಂದಣಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಎನಿವೇರ್ ನೋಂದಣಿ ವ್ಯವಸ್ಥೆ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ.
ಇದರಿಂದಾಗಿ ಸ್ಥಿರಾಸ್ತಿ ನೋಂದಣಿಗೆ ಒಂದೇ ಕಚೇರಿಯನ್ನು ನೆಚ್ಚಿಕೊಳ್ಳಬೇಕಿಲ್ಲ. ಜನರಿಗೆ ಸಮಯ, ಹಣದ ಉಳಿತಾಯವಾಗುತ್ತದೆ. ಆಯ್ದ ಕಚೇರಿಗಳಲ್ಲಿ ನೋಂದಣಿ ದಟ್ಟಣೆ ತಗ್ಗಿಸಬಹುದಾಗಿದೆ. ಇದರಿಂದ ಜನರಿಗೆ ಅನುಕೂಲವಾಗುತ್ತದೆ. ಉಪ ನೋಂದಣಿ ಕಚೇರಿಗಳಲ್ಲಿ ಕೆಲಸದ ಸಮಾನ ಹಂಚಿಕೆಗೂ ನೆರವಾಗುತ್ತದೆ ಎಂದು ಹೇಳಲಾಗಿದೆ.