ಪ್ರತಿಯೊಬ್ಬರ ತಂದೆ-ತಾಯಿಯು ತಮ್ಮ ಮಕ್ಕಳ ಬಗ್ಗೆ ಒಳ್ಳೆಯದನ್ನೇ ಬಯಸುತ್ತಾರೆ. ಮಕ್ಕಳೇನಾದ್ರೂ ತಮ್ಮಿಂದ ದೂರದಲ್ಲಿದ್ದರೆ ಅಂತೂ ಅಮ್ಮನ ಸ್ಥಿತಿ ಕೇಳೋದೇ ಬೇಡ…. ತನ್ನ ಮಗ ಅಥವಾ ಮಗಳು ಊಟ ಮಾಡ್ರಿದ್ರೋ ಇಲ್ವೋ ಎಂಬ ಬಗ್ಗೆನೇ ಅವರಿಗೆ ಚಿಂತೆಯಾಗಿರುತ್ತದೆ. ಮನೆಗೆ ಬಂದ ಕೂಡಲೇ ಅವರು ಹೇಳೋದು ಒಂದೇ ಮಾತು ಯಾಕಿಷ್ಟು ಸಣ್ಣ ಆಗಿದ್ದೀಯಾ ಅಂತಾ….. ಇದೇನಪ್ಪಾ ಇವರು ಪೀಠಿಕೆ ಹಾಕ್ತಿದ್ದಾರೆ ಅಂತಾ ಅನ್ಕೋಬೇಡಿ, ಈ ಸ್ಟೋರಿ ಓದಿ.
ತನ್ನ ಪುತ್ರನ ಕಾಳಜಿಯ ಬಗ್ಗೆ ಬಾಲಿವುಡ್ ನಟ ಅನುಪಮ್ ಖೇರ್ ಅವರ ತಾಯಿ ಕೂಡ ಹೊರತಾಗಿಲ್ಲ. ತೂಕ ಇಳಿಸಿಕೊಳ್ಳಲು ನಟ ಅನುಪಮ್ ಖೇರ್ ಡಯೆಟ್ ಮಾಡುತ್ತಿದ್ದರೆ, ಅವರ ತಾಯಿ ಅದನ್ನು ಟೀಕಿಸಿದ್ದಾರೆ. ಅಲ್ಲದೆ ತನ್ನ ಪುತ್ರ, ನಟ ಅನುಪಮ್ ಖೇರ್ ಅವರನ್ನು ಒಣಮೀನಿಗೆ ಹೋಲಿಸಿದ್ದಾರೆ.
ತಾಯಿ ಹಾಗೂ ಮಗನ ನಡುವಿನ ಸಂಭಾಷಣೆಯ ಈ ಉಲ್ಲಾಸದ ವಿಡಿಯೋ ಇನ್ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಭಾರಿ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ತಾಯಿಯ ಪ್ರತಿಕ್ರಿಯೆ ಕೇಳಿ ನಕ್ಕಿದ್ದಾರೆ.
ತೆಳ್ಳಗಿದ್ದರೆ ನಟ ಖೇರ್ ಹೇಗೆ ಚೆನ್ನಾಗಿ ಕಾಣುವುದಿಲ್ಲ ಎಂಬ ಬಗ್ಗೆ ಅವರ ತಾಯಿ ವಿವರಿಸಿದ್ದಾರೆ. ಈ ವೇಳೆ ತಾನು ತಿನ್ನುತ್ತಿದ್ದ ಪರೋಟವನ್ನು ನಟ ತನ್ನ ತಾಯಿಗೆ ತೋರಿಸಿದ್ರೂ, ಅವರು ಸುಮ್ಮನಾಗುವುದಿಲ್ಲ.
ಈ ವಿಡಿಯೋವನ್ನು ನಟ ಅನುಪಮ್ ಖೇರ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಒಂದು ತಿಂಗಳ ನಂತರ ತಾಯಿಯನ್ನು ಭೇಟಿಯಾದೆ. ತನ್ನನ್ನು ನೋಡಿದ ಕೂಡಲೇ ಯಾಕಿಷ್ಟು ತೆಳ್ಳಗಾಗಿದ್ದೀಯಾ ಎಂದು ಅಚ್ಚರಿ ಪಡುತ್ತಾ ಕೇಳಿದ್ದಾಳೆ. ಅಲ್ಲದೆ ತನ್ನನ್ನು ಒಣಮೀನಿಗೆ ಹೋಲಿಸಿರುವುದಾಗಿ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಸದ್ಯ, ಈ ಮುದ್ದಾದ ವಿಡಿಯೋ ವೈರಲ್ ಆಗಿದ್ದು, 2 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
https://youtu.be/hlkE_PJ7lJE