ಕಿಂಗ್ ಜಾರ್ಜ್ಸ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ 989 ಆರೋಗ್ಯ ಕಾರ್ಯಕರ್ತರು ಹಾಗೂ 500 ಪ್ಲಾಸ್ಮಾ ದಾನಿಗಳ ಮೇಲೆ ನಡೆಸಲಾದ ಅಧ್ಯಯನದಲ್ಲಿ ಕೊರೊನಾ ಲಸಿಕೆ ಪಡೆದ ಬಳಿಕ ದೇಹದಲ್ಲಿ ಉತ್ಪತ್ತಿಯಾಗುವ ಆಂಟಿಬಾಡಿಗಳು ಶಕ್ತಿಶಾಲಿ ಹಾಗೂ ಬಹಳ ಕಾಲದವರೆಗೆ ಇರುತ್ತವೆ ಎಂದು ತಿಳಿದುಬಂದಿದೆ.
ಆದರೆ ಸೋಂಕಿನ ಬಳಿಕ ದೇಹದಲ್ಲಿ ಸ್ವಯಂ ಉತ್ಪಾದನೆಯಾಗುವ ಆಂಟಿಬಾಡಿಗಳು ಇಷ್ಟೊಂದು ಶಕ್ತಿಶಾಲಿ ಇರೋದಿಲ್ಲ ಹಾಗೂ ಇವುಗಳ ಸಾಮರ್ಥ್ಯ ನಾಲ್ಕು ತಿಂಗಳಿಗಿಂತಲೂ ಕಡಿಮೆ ಎಂದು ತಿಳಿದುಬಂದಿದೆ.
ಈ ಅಧ್ಯಯನದ ಪ್ರಕಾರ ಕೊರೊನಾ ಲಸಿಕೆಯನ್ನ ಪಡೆದುಕೊಂಡಲ್ಲಿ ಮಾತ್ರ ಸೋಂಕಿನ ಸರಪಳಿಯಿಂದ ಪಾರಾಗಬಹುದಾಗಿದೆ ಎಂದು ತಿಳಿದುಬಂದಿದೆ. ಈ ಅಧ್ಯಯನದಲ್ಲಿ ಭಾಗಿಯಾದ 989 ಆರೋಗ್ಯ ಕಾರ್ಯಕರ್ತರಲ್ಲಿ ನಾಲ್ಕನೇ ದರ್ಜೆ ಸಿಬ್ಬಂದಿ, ಕಿರಿಯ ವೈದ್ಯರು, ಸಿಬ್ಬಂದಿಗಳು ಸೇರಿದ್ದರು. ಇವರಲ್ಲಿ 73 ಪ್ರತಿಶತ ಮಂದಿ ಎರಡು ಡೋಸ್ ಲಸಿಕೆಯನ್ನ ಸ್ವೀಕರಿಸಿದ್ದರು ಹಾಗೂ 13 ಪ್ರತಿಶತ ಮಂದಿ 1 ಡೋಸ್ ಲಸಿಕೆ ಪಡೆದಿದ್ದರು. ಇವರಲ್ಲಿ 869 ಮಂದಿ (88 ಪ್ರತಿಶತ) ದೇಹದಲ್ಲಿ ಆಂಟಿಬಾಡಿ ಉತ್ಪಾದನೆಯಾಗಿತ್ತು. ಉಳಿದವರು ಕೊರೊನಾ ಲಸಿಕೆ ಪಡೆದವರಲ್ಲ ಹಾಗೂ ಕಳೆದ ಕೆಲ ದಿನಗಳ ಹಿಂದಷ್ಟೇ ಸೋಂಕಿನಿಂದ ಗುಣಮುಖರಾದವರಾಗಿದ್ದರು.
ಎರಡೂ ಡೋಸ್ಗಳನ್ನ ಪಡೆದ ಬಳಿಕವೂ 61 ಆರೋಗ್ಯ ಕಾರ್ಯಕರ್ತರಲ್ಲಿ ಯಾವುದೇ ಆಂಟಿಬಾಡಿ ಉತ್ಪಾದನೆಯಾಗಿರಲಿಲ್ಲ. ಇದೇ ರೀತಿ ಒಂದು ಡೋಸ್ ಲಸಿಕೆ ಸ್ವೀಕರಿಸಿದ 25 ಮಂದಿಯಲ್ಲಿ ಆಂಟಿಬಾಡಿ ಉತ್ಪಾದನೆಯಾಗಿಲ್ಲ.
ಇನ್ನು 14 ದಿನಗಳಿಂದ 3 ತಿಂಗಳ ಸಮಯದಲ್ಲಿ ಪ್ಲಾಸ್ಮಾ ದಾನ ಮಾಡಿದ 500 ಮಂದಿಯಲ್ಲಿ 50 ಮಂದಿಯಲ್ಲಿ ಮಾತ್ರ ಸಾಕಷ್ಟು ಆಂಟಿಬಾಡಿ ಉತ್ಪಾದನೆಯಾಗಿದೆ. ಉಳಿದವರಲ್ಲಿ ಆಂಟಿಬಾಡಿ ಖಾಲಿಯಾಗಿದ್ದರೆ ಇನ್ನೂ ಕೆಲವರಲ್ಲಿ ದೇಹಕ್ಕೆ ಬೇಕಾಗುವಷ್ಟು ಆಂಟಿಬಾಡಿ ಉತ್ಪಾದನೆಯೇ ಆಗಿರಲಿಲ್ಲ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.