ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೂರನೇ ಅಲೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ ಲಕ್ನೋದ ವೈದ್ಯಕೀಯ ಕಾಲೇಜಿನಲ್ಲಿ ಕೊರೊನಾಗೆ ಸಂಬಂಧಿಸಿದ ಸಂಶೋಧನೆಯೊಂದು ನಡೆದಿದೆ. ಇದ್ರಲ್ಲಿ ಆಸಕ್ತಿದಾಯಕ ವಿಷ್ಯ ಹೊರ ಬಿದ್ದಿದೆ.
ಸಂಶೋಧನೆಯಲ್ಲಿ, ಪುರುಷರಿಗಿಂತ ಮಹಿಳೆಯರಲ್ಲಿ ಪ್ರತಿಕಾಯಗಳು ಕಡಿಮೆ ಅಭಿವೃದ್ಧಿ ಹೊಂದುತ್ತಿವೆ ಎಂಬುದು ಕಂಡು ಬಂದಿದೆ. ಹಾಗಾಗಿ ಮಹಿಳೆಯರು ಹೆಚ್ಚು ಎಚ್ಚರಿಕೆಯಿಂದಿರುವ ಅವಶ್ಯಕತೆಯಿದೆ. ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನ ಉಪಕುಲಪತಿ ಬಿಪಿನ್ ಪುರಿ, ಅಪಾಯ ಇನ್ನೂ ಮುಗಿದಿಲ್ಲ. ಈ ರೋಗವು 1 ರಿಂದ 2 ವರ್ಷಗಳವರೆಗೆ ನಮ್ಮಿಂದ ದೂರವಾಗುವುದಿಲ್ಲ. ಹಾಗಾಗಿ ಜನರು ಜಾಗರೂಕರಾಗಿರುವುದು ಬಹಳ ಮುಖ್ಯ ಎಂದಿದ್ದಾರೆ. ಮಾಸ್ಕ್ ನಮ್ಮ ಜೀವನದ ಒಂದು ಭಾಗವಾಗಬೇಕು ಎಂದವರು ಹೇಳಿದ್ದಾರೆ.
ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ನಿರಂತರವಾಗಿ ಕಡಿಮೆಯಾಗುತ್ತಿರುವುದು ಸಮಾಧಾನಕರ ಸಂಗತಿ. ಉತ್ತರ ಪ್ರದೇಶದಲ್ಲಿ ನಿನ್ನೆ 22 ಹೊಸ ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 17,09,173 ಕ್ಕೆ ಏರಿದೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 22,794 ಜನರು ಸಾವನ್ನಪ್ಪಿದ್ದಾರೆ.