
ನವದೆಹಲಿ: ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ಕೈಗೊಂಡಿದ್ದ ಟ್ರ್ಯಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ತಿರುಗಿದೆ. ಶಾಂತಿಯುತ ಪ್ರತಿಭಟನೆ ಕೈಗೊಂಡಿದ್ದು, ಇದೇ ವೇಳೆ ಸಮಾಜಘಾತಕ ಶಕ್ತಿಗಳು ನುಸುಳಿವೆ ಎಂದು ರೈತ ಸಂಘಟನೆಗಳ ಒಕ್ಕೂಟವಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ಟ್ರ್ಯಾಕ್ಟರ್ ರ್ಯಾಲಿಯ ಸಂದರ್ಭದಲ್ಲಿ ದೆಹಲಿಯಲ್ಲಿ ಹಿಂಸಾಚಾರ ನಡೆಸಿದವರಿಗೂ ರೈತರ ಸಂಘಟನೆಗಳಿಗೂ ಯಾವುದೇ ಸಂಬಂಧವಿಲ್ಲ. ಕೆಲವರು ಪೂರ್ವಯೋಜಿತರಾಗಿ ಇಂತಹ ಕೃತ್ಯ ನಡೆಸಿದ್ದಾರೆ. ನಿಗದಿಯಾಗಿದ್ದ ಮಾರ್ಗವನ್ನು ಬಿಟ್ಟು ಬೇರೆ ದಾರಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಪೊಲೀಸರೊಂದಿಗೆ ಘರ್ಷಣೆ ನಡೆದಿದೆ. ಹಿಂಸಾಚಾರದ ಘಟನೆಗಳನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ. ಇದು ಸ್ವೀಕಾರಾರ್ಹವಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ರೈತರ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗಿಯಾದ ರೈತರಿಗೆ ಧನ್ಯವಾದ ಹೇಳಬಯಸುತ್ತೇವೆ. ಆದರೆ, ಇದೇ ವೇಳೆ ನಡೆದ ಹಿಂಸಾಚಾರವನ್ನು ಖಂಡಿಸುತ್ತೇವೆ. ದುಷ್ಕೃತ್ಯದಲ್ಲಿ ಭಾಗಿಯಾದವರಿಗೂ ರೈತ ಸಂಘಟನೆಗಳಿಗೂ ಯಾವುದೇ ಸಂಬಂಧವಿಲ್ಲವೆಂದು ಸಂಯುಕ್ತ ಕಿಸಾನ್ ಮೋರ್ಚಾ ಪ್ರಕಟಣೆ ನೀಡಿದೆ.
ಶಾಂತಿಯೇ ನಮ್ಮ ಅತಿದೊಡ್ಡ ಶಕ್ತಿಯಾಗಿದೆ. ನಾವು ನಿಯಮ ಉಲ್ಲಂಘಿಸಿ ಹೋರಾಟ ನಡೆಸುವುದಾಗಿದ್ದರೆ ಎರಡು ತಿಂಗಳ ಕಾಲ ಮಳೆ, ಚಳಿಯಲ್ಲಿ ಶಾಂತಿಯುತ ಪ್ರತಿಭಟನೆ ಕೈಗೊಳ್ಳುತ್ತಿರಲಿಲ್ಲ. ನಾವು ಶಿಸ್ತಿನ ಮಾರ್ಗದಲ್ಲಿಯೇ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದೇವೆ. ಆದರೆ, ಕೆಲವು ಸಮಾಜಘಾತುಕ ಶಕ್ತಿಗಳು ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿದ್ದಾರೆ. ಪ್ರತಿಭಟನೆ ವೇಳೆ ಒಳನುಸುಳಿದ ಸಮಾಜಘಾತಕ ಶಕ್ತಿಗಳು ಇಂತಹ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ.