ಬೆಂಗಳೂರು: ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ದಾಟಿಯಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಹೊರಡಿಸಿರುವ ರಾಜ್ಯ ಸರ್ಕಾರದ ಆದೇಶ ಖಾಸಗಿ ಶಾಲೆಗಳಿಗೂ ಅನ್ವಯಿಸಲಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ಸ್ಪಷ್ಟೀಕರಣ ನೀಡಿದೆ.
ನಾಡಗೀತೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ರದ್ದು ಮಾಡುವಂತೆ ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ನಡೆದಿದೆ. ಸರ್ಕಾರಿ ವಕೀಲರು ಸ್ಪಷ್ಟೀಕರಣ ಸಲ್ಲಿಸಿದ್ದಾರೆ.
ಬಳಿಕ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, ನಾಡಗೀತೆಯು ನಿರ್ದಿಷ್ಟ ರಾಗದಲ್ಲಿ ಹಾಡುವುದನ್ನು ಕಡ್ಡಾಯ ಮಾಡಿ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಯಾವುದೇ ಶಾಸನಾತ್ಮಕ ಬೆಂಬಲ ಇಲ್ಲವೆಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ಹಾಗಾದರೆ, ಅಂತಹ ಆದೇಶ ಹೊರಡಿಸಲು ಯಾವ ಶಾಸನಾತ್ಮಕ ಅಧಿಕಾರವನ್ನು ಹೊಂದಿದೆ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಅಗತ್ಯ ಮಾಹಿತಿ ಪಡೆದು ವಿವರಣೆ ನೀಡುವುದಾಗಿ ಸರ್ಕಾರಿ ವಕೀಲರು ಭರವಸೆ ನೀಡಿದ್ದು, ಅದಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ನಾಡಗೀತೆ ಸಾಂವಿಧಾನಿಕವಾಗಿ ಅತ್ಯಂತ ಸೂಕ್ಷ್ಮ ವಿಚಾರವಾಗಿದೆ. ನಾಡಗೀತೆ ವಿಚಾರದಲ್ಲಿ ರಾಜ್ಯ ಸರ್ಕಾರ ಏಕೆ ಗೊಂದಲ ಆದೇಶ ಹೊರಡಿಸುತ್ತಿದೆ. ಒಂದು ಆದೇಶ ಹೊರಡಿಸಿದ ನಂತರ ಅದನ್ನು ಹಿಂಪಡೆದು ತಿದ್ದುಪಡಿ ಆದೇಶ ಹೊರಡಿಸುತ್ತಿದೆ. ನಿರ್ದಿಷ್ಟ ರಾಗದಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಲು ಸಂವಿಧಾನ ಅಥವಾ ಇತರೆ ಶಾಸನದ ಬೆಂಬಲ ಇರಬೇಕು. ರಾಜ್ಯ ಸರ್ಕಾರ ವಿವೇಚನಾ ಅಧಿಕಾರ ಬಳಸಿ ಕಾರ್ಯಕಾರಿ ಆದೇಶ ಹೊರಡಿಸಲಾಗದು. ಈ ಬಗ್ಗೆ ಸಮಗ್ರ ವಿವರ ನೀಡಬೇಕೆಂದು ಸೂಚಿಸಿ ವಿಚಾರಣೆಯನ್ನು ಏ. 10ಕ್ಕೆ ಮುಂದೂಡಿದೆ.