ಇರುವೆ ಸಂಘಟಿತವಾದರೆ ಜರನ್ನು ಓಡಿಸಲು ಸಾಧ್ಯ ಎಂದು ಊಹಿಸಲು ಸಾಧ್ಯವೇ? ಅಂಥದ್ದೊಂದು ಘಟನೆ ಒಡಿಶಾದಲ್ಲಿ ನಡೆದಿದೆ. ಬ್ರಹ್ಮನಸಾಯಿ ಎಂಬ ಗ್ರಾಮದ ಜನ ಇರುವೆ ದಾಳಿಗೆ ಬೆದರಿ ಪೇರಿ ಕಿತ್ತಿದ್ದಾರೆ.
ಮನೆಗಳು, ರಸ್ತೆಗಳು, ಹೊಲಗಳು ಮತ್ತು ಮರಗಳು ಸೇರಿದಂತೆ ಗ್ರಾಮದ ಮೂಲೆ ಮೂಲೆಗಳಲ್ಲಿ ಇರುವೆಗಳ ಹಿಂಡುಗಳು ಮುತ್ತಿಕೊಂಡಿವೆ. ಹಲವರಿಗೆ ಈ ಇರುವೆಗಳು ಕಚ್ಚಿದ್ದು, ಊತ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ. ಸಾಕುಪ್ರಾಣಿಗಳು ಮತ್ತು ಮನೆಯ ಹಲ್ಲಿಗಳು ಕೂಡ ಇರುವೆ ದಾಳಿಗೆ ಬಲಿಯಾಗಿವೆ.
ಗ್ರಾಮಸ್ಥರು ಎಲ್ಲಿ ಕುಳಿತುಕೊಳ್ಳುವಾಗ, ಮಲಗುವಾಗ ಕೀಟನಾಶ ಪುಡಿಯಿಂದ ವೃತ್ತಗಳನ್ನು ಎಳೆದುಕೊಂಡು ಕೂರುವ ಪರಿಸ್ಥಿತಿ ನಿಮಾರ್ಣವಾಗಿತ್ತು. ಗ್ರಾಮದ ಮೂರು ಕುಟುಂಬಗಳು ಇರುವೆಗಳ ಕಾಟದಿಂದ ಮುಕ್ತಿ ಪಡೆಯಲು ಗುಳೆ ಹೋಗಿದ್ದು, ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಾರೆ.
ಇರುವೆಗಳು ನಮ್ಮ ಜೀವನವನ್ನು ದುಸ್ತರಗೊಳಿಸಿವೆ, ನಾವು ತಿನ್ನಲು, ಮಲಗಲು ಅಥವಾ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ಹೇಳಿದ್ದು, ಇರುವೆಗಳ ಭಯದಿಂದ ಮಕ್ಕಳು ಓದಲು ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಒಡಿಶಾ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಜಿಲ್ಲಾಡಳಿತ ಈ ಬೆಳವಣಿಗೆಗೆ ಕಾರಣ ಹುಡುಕಾಡುತ್ತಿದೆ. ಹಾಗೆಯೇ ಗ್ರಾಮಸ್ಥರಿಗೆ ಪರಿಹಾರ ಒದಗಿಸಲು ಕಾರ್ಯಾಚರಣೆ ಆರಂಭಿಸಿದೆ.
ನದಿ ದಂಡೆ ಮತ್ತು ಪೊದೆಗಳಲ್ಲಿ ವಾಸಿಸುವ ಇರುವೆಗಳ ಆವಾಸಸ್ಥಾನಗಳು ಪ್ರವಾಹದ ನೀರಿನಿಂದ ಮುಳುಗಿದ್ದರಿಂದ ಅವು ಹಳ್ಳಿಗೆ ಸ್ಥಳಾಂತರಗೊಂಡಿವೆ, ಸುಮಾರು 100 ಕುಟುಂಬಗಳು ವಾಸಿಸುವ ಗ್ರಾಮದಲ್ಲಿ ಈ ವಿದ್ಯಮಾನ ನಡೆದಿದ್ದು, 2013 ರಲ್ಲಿ ಜಿಲ್ಲೆಯ ಸದರ್ ಬ್ಲಾಕ್ನ ದಂಡಾ ಗ್ರಾಮದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು ಎಂದು ವಿಜ್ಞಾನಿ ತಿಳಿಸಿದ್ದಾರೆ.