ಫೆಬ್ರವರಿ 26 ರಿಂದ ಮಾರ್ಚ್ 2ರವರೆಗೆ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದ್ದು, ಶಿಕ್ಷಣ ಇಲಾಖೆ ಪ್ರಶ್ನೆ ಪತ್ರಿಕೆ ಮಾತ್ರ ನೀಡಲಿದೆ. ಉತ್ತರ ಪತ್ರಿಕೆಗಳ ಜವಾಬ್ದಾರಿ ಶಾಲೆಗಳದ್ದು ಇಲ್ಲವೇ ವಿದ್ಯಾರ್ಥಿಗಳಿಗೆ ಸೇರಿದ್ದು ಎಂದು ಹೇಳಲಾಗಿದೆ.
ಈ ಮೂಲಕ ಶಿಕ್ಷಣ ಇಲಾಖೆ ಎಡವಟ್ಟುಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾದಂತಾಗಿದೆ. ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಶಾಲಾ ಮುಖ್ಯಸ್ಥರಿಗೆ ಈ ಕುರಿತಾಗಿ ವಾಟ್ಸಾಪ್ ಸಂದೇಶ ಕಳುಹಿಸಿದ್ದು, ಇಲಾಖೆ ವತಿಯಿಂದ ಕೇವಲ ಪ್ರಶ್ನೆ ಪತ್ರಿಕೆಗಳನ್ನು ಮಾತ್ರ ಪೂರೈಸಲಾಗುತ್ತದೆ. ಉತ್ತರ ಪತ್ರಿಕೆಗಳನ್ನು ಶಾಲೆಗಳಿಂದಲೇ ಒದಗಿಸಬೇಕು ಎಂದು ತಿಳಿಸಿದ್ದಾರೆ. ಆದರೆ, ಇದಕ್ಕೆ ಎಲ್ಲಿಂದ ಹಣ ಪೂರೈಸಬೇಕು ಎನ್ನುವುದರ ಕುರಿತಾಗಿ ಮಾಹಿತಿ ಇಲ್ಲದ ಕಾರಣ ಶಾಲೆಯವರು ಮಕ್ಕಳ ಮೇಲೆ ಆರ್ಥಿಕ ಹೊರೆ ಹೊರಿಸಿದ್ದು, ಮನೆಯಿಂದಲೇ ಉತ್ತರ ಪತ್ರಿಕೆಗಳನ್ನು ತರುವಂತೆ ಪೋಷಕರಿಗೆ ಜವಾಬ್ದಾರಿ ವರ್ಗಾಯಿಸಲಾಗಿದೆ.
10ನೇ ತರಗತಿ ಬೋರ್ಡ್ ಪರೀಕ್ಷೆ ಆಗಿರುವುದರಿಂದ ಮಕ್ಕಳಲ್ಲಿನ ಪರೀಕ್ಷಾ ಭಯ ಹೋಗಲಾಡಿಸುವ ಉದ್ದೇಶದಿಂದ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲಾಗುತ್ತದೆ. ಅಂತಿಮ ಪರೀಕ್ಷೆಯನ್ನು ನಡೆಸುವ ರೀತಿಯಲ್ಲಿಯೇ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲಿದ್ದು, ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳನ್ನು ಇಲಾಖೆಯಿಂದ ನೀಡಲಾಗುತ್ತಿತ್ತು.
ಈ ಬಾರಿ ಹೊಸ ನಿಯಮ ಜಾರಿಗೆ ತರಲಾಗಿದೆ. ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಗೆ 50 ರೂ. ಶುಲ್ಕ ಪಾವತಿಸಿದ್ದು, ಈಗ ಉತ್ತರ ಪತ್ರಿಕೆಗಳನ್ನು ಮಕ್ಕಳೇ ತರುವಂತೆ ಹೇಳಲಾಗಿದೆ. ಇದಕ್ಕೆ ಪೋಷಕರು, ವಿದ್ಯಾರ್ಥಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.