ತಮ್ಮ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಲೈವ್ ವಿಡಿಯೋದಲ್ಲಿ ಮಾತನಾಡುವ ವೇಳೆ ಖ್ಯಾತ ನಟ ರಿಯಲ್ ಸ್ಟಾರ್ ಉಪೇಂದ್ರ ಆಡಿರುವ ಮಾತೊಂದು ಅವರಿಗೆ ಸಂಕಷ್ಟ ತಂದೊಡ್ಡಿದೆ. ಅವರ ಈ ಮಾತಿನ ವಿರುದ್ಧ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಧುಸೂದನ್ ಎಂಬವರು ಅಟ್ರಾಸಿಟಿ ಕೇಸ್ ದಾಖಲಿಸಿದ್ದು, ಇದರ ಜೊತೆಗೆ ಇತರೆಯವರು ಸಹ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದರು.
ಇದೀಗ ಉಪೇಂದ್ರ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಕರ್ನಾಟಕ ರಣಧೀರ ಪಡೆ ರಾಜ್ಯಾಧ್ಯಕ್ಷ ಭೈರಪ್ಪ ಹರೀಶ್ ಕುಮಾರ್, ಉಪೇಂದ್ರ ಅವರ ಈ ಹೇಳಿಕೆ ಕುರಿತಂತೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈಗಾಗಲೇ ಒಂದು ಠಾಣೆಯಲ್ಲಿ ಉಪೇಂದ್ರ ಅವರ ವಿರುದ್ಧ ಎಫ್ಐರ್ ದಾಖಲಾಗಿದೆ ಎಂದು ಪೊಲೀಸರು ಮನವರಿಕೆ ಮಾಡಲು ಮುಂದಾದಾಗ ಪಟ್ಟು ಹಿಡಿದು ಭೈರಪ್ಪ ಹರೀಶ್ ಕುಮಾರ್ ಎಫ್ಐಆರ್ ಮಾಡಿಸಿದ್ದಾರೆ.
ಈ ಕುರಿತಂತೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಭೈರಪ್ಪ ಹರೀಶ್ ಕುಮಾರ್, ‘ಹರೀಶ್ ಸರ್ ಒಂದೇ ಕಡೆ ಎಫ್ಐಆರ್ ಸಾಕು ಎಂದು ಪೊಲೀಸರು, ಇಲ್ಲ ಅದು ಟೆಕ್ನಿಕಲಿ ಸಮಸ್ಯೆ ಇದೆ ನನ್ನ ಕಂಪ್ಲೇಂಟ್ ದಾಖಲಿಸಲೇಬೇಕು ಎಂದು ನಾನು …! ಇಂಥ ಜಾತಿವಾದಿ Upendra ಶೋಷಣೆ ಮಾಡುವ ಸಮಾಜ ಬಲಗೊಳಿಸಲು ಒಳಗೊಳಗೆ ಸಂಚು ರೂಪಿಸುವವನ ಬಿಡುವುದುಂಟೆ, ಅಷ್ಟಕ್ಕೂ ನಾನೊಬ್ಬ ಹೋರಾಟಗಾರ FIR ದಾಖಲು ಮಾಡಿಸದೆ ನಾನು ಮನೆಗೆ ಹಿಂತಿರುಗುವುದಿಲ್ಲ ಇದು ನನ್ನ ಶಪಥ ಎಂದು ಪೊಲೀಸರ ಮುಂದೆ ಗಟ್ಟಿಯಾಗಿ ನಿಂತು ಬಿಟ್ಟೆ , ಪೊಲೀಸರು ಕಾದು ಕಾದು ಸುಸ್ತಾಗಿ ಇವನು ಬಿಡುವ ಹಾಗೆ ಕಾಣುತ್ತಿಲ್ಲ ಎಂದು ಕೊನೆಗೂ ಎಫ್ಐಆರ್ ದಾಖಲಿಸಿಬಿಟ್ಟರು’ ಎಂದು ಹೇಳಿದ್ದಾರೆ.