ಯಾದಗಿರಿ : ಯಾದಗಿರಿಯಲ್ಲಿ ಮತ್ತೊಂದು ದುರಂತ ನಡೆದಿದ್ದು, ಕಲುಷಿತ ನೀರು ಸೇವಿಸಿ 8 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮಾಲರಬಾವಿ ಗ್ರಾಮದ ಜನರು ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದಾರೆ. ಸದ್ಯ, ಗ್ರಾಮಕ್ಕೆ ವೈದ್ಯರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶುಚಿಯಾಗಿರದ ತೆರೆದ ಬಾವಿಯ ನೀರು ಸೇವಿಸಿದ ಹಿನ್ನೆಲೆ ಜನರು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಗಾಜರಕೋಟ ಗ್ರಾಮದಲ್ಲಿ 19 ಮಂದಿಗೆ ಇದ್ದಕ್ಕಿದ್ದ ಹಾಗೆ ವಾಂತಿ ಭೇದಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಬೆನ್ನಲ್ಲೇ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮಾಲರಬಾವಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಾಜ್ಯದ ಹಲವು ಕಡೆ ಸತತ 1 ತಿಂಗಳಿನಿಂದ ಇಂತಹ ಘಟನೆಗಳು ನಡೆಯುತ್ತಿದ್ದರೂ ಇನ್ನೂ ಕೂಡ ಅಧಿಕಾರಿಗಳು ಬುದ್ದಿ ಕಲಿತಿಲ್ಲ, ಶುಚಿಯಾದ ನೀರು ಪೂರೈಸುವಲ್ಲಿ ಅಧಿಕಾರಿಗಳು ವಿಫಲರಾಗಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.