
ಗಿಟ್‌ಹಬ್‌ನಲ್ಲಿ ‘ಸುಲ್ಲಿ ಡೀಲ್ಸ್’ ರೀತಿಯಲ್ಲಿ ‘ಬುಲ್ಲಿ ಬಾಯಿ’ ಎಂಬ ಗುಂಪನ್ನು ರಚಿಸಲಾಗಿದೆ, ಸಾಮಾಜಿಕ ಮಾಧ್ಯಮ ಖಾತೆಗಳಿಂದ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಸಂಗ್ರಹಿಸಿ ಹರಾಜು ಹಾಕಲಾಗ್ತಿದೆ. ಜೊತೆಗೆ ಹಲವು ಯುವಕರನ್ನ ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲಾಗುತ್ತಿದೆ ಎಂದು ಮಹಿಳಾ ಪತ್ರಕರ್ತೆಯೊಬ್ಬರು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. ಜೊತೆಗೆ ಬುಲ್ಲಿಬಾಯಿ ಲಿಸ್ಟ್ ನಲ್ಲಿ ತನ್ನ ಹೆಸರು ಇದೆ ಎಂದಿದ್ದಾರೆ. ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಹಿಳೆಯರಿಗೆ ಬೆಂಬಲ ನೀಡಿ ಟ್ವೀಟ್ ಮಾಡಿದ್ದಾರೆ.
ಬುಲ್ಲಿಬಾಯಿ ಗ್ರೂಪ್ ಸೃಷ್ಟಿಸಿರುವ ಆರೋಪಿ ಖಾತೆಯನ್ನ ಗಿಟ್ ಹಬ್ ನಿರ್ಬಂಧಿಸಿದೆ. ಪೊಲೀಸರು ಮತ್ತು ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT) ಈ ಬಗ್ಗೆ ತನಿಖೆ ನಡೆಸುತ್ತಿದೆ. ಇಂದು ಬೆಳಿಗ್ಗೆಯೇ ಗ್ರೂಪನ್ನ ಬ್ಲಾಕ್ ಮಾಡಿರುವದನ್ನ GitHub ದೃಢಪಡಿಸಿದೆ. CERT ಮತ್ತು ಪೊಲೀಸ್ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳುತ್ತಾರೆ” ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ಭಾನುವಾರ ಟ್ವೀಟ್ ಮಾಡಿದ್ದಾರೆ.
ಸುಲ್ಲಿ ಡೀಲ್ ಪ್ರಕರಣ ಏನು…?
ಜುಲೈ 4, 2021 ರಂದು, ಗಿಟ್ ಹಬ್ ನಲ್ಲಿ ಸುಲ್ಲಿಡೀಲ್ಸ್(Sullideals) ಅನ್ನೋ ಗ್ರೂಪ್ನ ಸ್ಕ್ರೀನ್‌ಶಾಟ್‌ಗಳನ್ನ ಹಲವಾರು ಟ್ವಿಟ್ಟರ್ ಬಳಕೆದಾರರು ಹಂಚಿಕೊಂಡಿದ್ದರು. ಈ ಗ್ರೂಪ್ ನಲ್ಲಿ “ಸುಲ್ಲಿ ಡೀಲ್ ಆಫ್ ದಿ ಡೇ” ಎಂಬ ಟ್ಯಾಗ್ ಲೈನ್ ನೀಡಿ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಹಾಕಲಾಗಿತ್ತು. ಸುಲ್ಲಿ ಎಂಬುದು ಮಹಿಳೆಯರ ವಿರುದ್ಧ ಅವಹೇಳನಕಾರಿ ಪದವಾಗಿದೆ.
‘ಸುಲ್ಲಿಡೀಲ್’ ಅಪ್ಲಿಕೇಶನ್ ತಯಾರಕರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅಕ್ರಮವಾಗಿ ಸಂಗ್ರಹಿಸಿ, ಅವರನ್ನು ಟ್ರೋಲ್ ಮಾಡಿ, ಅವರ ಫೋಟೋಗಳನ್ನು ಅನುಚಿತವಾಗಿ ಬಳಸುತ್ತಿದ್ದರು ಮತ್ತು ಅವರನ್ನ ಹರಾಜು ಹಾಕಿ, ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಜನರನ್ನು ಪ್ರೋತ್ಸಾಹಿಸುತ್ತಿದ್ದರು.