ಬೆಂಗಳೂರು : ರಾಜ್ಯದಲ್ಲಿ ಧ್ವಜ ದಂಗಲ್ ಶುರುವಾಗಿದ್ದು, ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಜೆ ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಸಿರು ಮತ್ತು ಹಳದಿ ಬಣ್ಣದ ಧ್ವಜ ಹಾರಿಸಲಾಗಿದ್ದು, ಭಾರಿ ಆಕ್ಷೇಪಣೆ ವ್ಯಕ್ತವಾಗಿದೆ.
ಈ ಬಗ್ಗೆ ಶಶಾಂಕ್ ಜೆಎಸ್ ಎಂಬುವರು ಟ್ವೀಟ್ ಮಾಡಿ ಚಾವರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಜೆ ನಗರ ಪೊಲೀಸ್ ಠಾಣೆ ಎದುರಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಹಸಿರು ಧ್ವಜ ಹಾರಿಸಲಾಗಿದೆ. ಇದಕ್ಕೆ ಹೇಗೆ ಅವಕಾಶ ಮಾಡಿಕೊಟ್ಟಿದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪ್ರಶ್ನಿಸಿದ್ದಾರೆ. ಹಾಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಶಿವಾಜಿನಗರದ ಚಾಂದಿನಿ ಚೌಕ್ನ ಬೀದಿ ದೀಪದ ಮೇಲೆ ಹಾರಿಸಲಾಗಿದ್ದ ಹಸಿರು ಧ್ವಜ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಭಾರಿ ಆಕ್ಷೇಪಣೆ ಬಳಿಕ ಪೊಲೀಸರು ಇದನ್ನು ತೆರವುಗೊಳಿಸಿ ರಾಷ್ಟ್ರಧ್ವಜ ಹಾರಿಸಿದ್ದರು. ಬೆಂಗಳೂರು ಶಿವಾಜಿನಗರದ ಚಾಂದಿನಿ ಚೌಕ್ ನಲ್ಲಿ ಹಾರುತ್ತಿರುವ ಈ ಧ್ವಜ -ಯಾವ ಧರ್ಮದ್ದು ಕಾಂಗ್ರೆಸ್ಸ್ ನಾಯಕರು ಉತ್ತರ ಕೊಡಬೇಕು ಎಂದು ರಾಮಚಂದ್ರ ಯರಗಲ್ಲ ಎಂಬುವವರು ಟ್ವೀಟ್ ಮಾಡಿದ್ದರು.