ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ನಡುವೆಯೇ ಟೊಮೆಟೊ ಬೆಲೆ ರಾಕೆಟ್ ವೇಗದಲ್ಲಿ ಏರಿಕೆಯಾಗಿ ಗ್ರಾಹಕರಿಗೆ ಆಘಾತ ತಂದಿದ್ದ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ಸುದ್ದಿ ಹೊರ ಬಿದ್ದಿದೆ. ಟೊಮೆಟೊ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಟೊಮೆಟೊ ಬೆಲೆ ಇನ್ನಷ್ಟು ಏರಲಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕದಲ್ಲಿ 81,000 ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳಯಲಾಗುತ್ತದೆ. ಅದರಲ್ಲಿಯೂ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿಹೆಚ್ಚು ಟೊಮೆಟೊ ಬೆಳೆಯಲಾಗುತ್ತಿದೆ. ಒಂದೆಡೆ ಟೊಮೆಟೊ ಕಟಾವಿಗೆ ಬರುತ್ತಿದೆ. ಇನ್ನೊಂದೆಡೆ ವರುಣಾರ್ಭಟಕ್ಕೆ ಟೊಮೆಟೊ ಬೆಳೆ ಹಾಳಾಗುವ ಭೀತಿಯೂ ರೈತರಲ್ಲಿ ಶುರುವಾಗಿದೆ.
ರಾಜ್ಯದಲ್ಲಿ ಇದೇ ರೀತಿ ಮಳೆ ಮುಂದುವರೆದರೆ ಟೊಮೆಟೊ ಬೆಳೆಗೆ ಮತ್ತೆ ಸಂಕಷ್ಟ ಎದುರಾಗಲಿದ್ದು, ಸಹಜವಾಗಿ ಬೆಲೆ ಏರಿಕೆಯಾಗಲಿದೆ. ಇನ್ನು ಕೆಲವೇ ವಾರಗಳಲ್ಲಿ ಟೊಮೆಟೊ ಬೆಳೆ ಕಟಾವಿಗೆ ಬರಲಿದೆ. ಆಗಸ್ಟ್ 2 ಅಥವಾ 3ನೇ ವಾರದಲ್ಲಿ ಟೊಮೆಟೊ ಬೆಳೆ ಕಟಾವು ಆರಂಭವಾಗಲಿದೆ. ಆದರೆ ರಾಜ್ಯದಲ್ಲಿ ಮಳೆ ಅಬ್ಬರ ಜೋರಾಗಿರುವುದರಿಂದ ಬೆಳೆ ನಾಶವಾಗುವ ಆತಂಕವಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಕ್ವಿಂಟಲ್ ಟೊಮೆಟೊ ಬೆಲೆ 7000 ರೂಪಾಯಿ ಇದೆ. ಕೆಜಿಗೆ 100-120 ರೂಪಾಯಿ ಇದೆ. ಇನ್ನು ಆಗಸ್ಟ್ ತಿಂಗಳಲ್ಲಿ ವರುಣಾರ್ಭಟ ಹೆಚ್ಚಾಗಲಿದ್ದು, ಈ ವೇಳೆ ಕಟಾವಿಗೆ ಬಂದ ಟೊಮೆಟೊವನ್ನು ಮಾರುಕಟ್ಟೆಗೆ ಪೂರೈಕೆಯೂ ಕಷ್ಟಕರವಾಗಲಿದೆ. ಇದರಿಂದ ಟೊಮೆಟೊ ಬೆಲೆ ಮತ್ತಷ್ಟು ಗಗನಮುಖಿಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.