ಬೆಂಗಳೂರು : ಕೆಂಪು ಸುಂದರಿ ಟೊಮ್ಯಾಟೋ ಹಣ್ಣಿನ ದರ ಭಾರಿ ಏರಿಕೆ ಕಂಡು ಇಳಿಕೆಯಾಗುತ್ತಿರುವ ಹೊತ್ತಲ್ಲಿ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದೆ.
ಹೌದು, ಟೊಮ್ಯಾಟೋ ಬಳಿಕ ಈರುಳ್ಳಿ, ಬೆಳ್ಳುಳ್ಳಿ ಬೆಲೆಯಲ್ಲೂ ಏರಿಕೆಯಾಗಿದೆ. ಕೆಜೆ ಬೆಳ್ಳುಳ್ಳಿಗೆ 200 ರೂಪಾಯಿ ಇದೆ. ಹೊಸ ಬೆಳೆ ಬರುವವರಿಗೂ ಇದೆ ಬೆಲೆ ಮುಂದುವರಿಯುವ ಸಾಧ್ಯತೆ ಇದೆ. ಮತ್ತೊಂದು ಕಡೆ ಸದ್ದಿಲ್ಲದೆ ಈರುಳ್ಳಿ ಬೆಲೆ ಕೂಡ ಏರಿಕೆಯಾಗುತ್ತಿದೆ. ಕಳೆದ ಒಂದು ವಾರದಿಂದ ಈರುಳ್ಳಿ ಬೆಲೆಯಲ್ಲಿ ಕೆಜಿಗೆ ಸುಮಾರು 12 ರಿಂದ 15 ರೂ ರಷ್ಟು ಏರಿಕೆ ಕಂಡು ಬಂದಿದೆ. ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಹಲವು ಕಡೆ ರೈತರು ಈರುಳ್ಳಿ ಬೆಳೆ ಬೆಳೆದಿಲ್ಲ.
ದೇಶದ ಅತಿ ದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆಯಾಗಿರುವ ಲಸಲ್ ಗಾಂವ್ ಎಪಿಎಂಸಿಯಲ್ಲಿ ಈರುಳ್ಳಿ ಸಗಟು ದರ ಆಗಸ್ಟ್ 4ರಂದು 1550 ರೂ. ಇತ್ತು. ಅದೀಗ 2300 ರೂ.ಗೆ ಏರಿಕೆ ಕಂಡಿದೆ. ಕಳೆದ 8 ತಿಂಗಳ ಅವಧಿಯಲ್ಲಿ ಈರುಳ್ಳಿಯ ಗರಿಷ್ಠ ಸಗಟು ದರ ಇದಾಗಿದೆ.
ಈರುಳ್ಳಿ ಮಾರುಕಟ್ಟೆಗೆ ಬರುವುದು ಕಡಿಮೆಯಾಗಿದೆ. ಹೀಗಾಗಿ ಬೇಡಿಕೆ ಹೆಚ್ಚಿದ್ದರಿಂದ ದರ ಏರಿಕೆ ಕಂಡಿದೆ. ಅಕ್ಟೋಬರ್ ನಲ್ಲಿ ಹೊಸ ಬೆಳೆ ಬರುವವರೆಗೆ ಬೆಲೆಗಳನ್ನು ನಿಯಂತ್ರಣದಲ್ಲಿರಲು ಮುಂದಾಗಿರುವ ಕೇಂದ್ರ ಸರ್ಕಾರ ಬಫರ್ ಸ್ಟಾಕ್ ನಿಂದ 3 ಲಕ್ಷ ಟನ್ ಈರುಳ್ಳಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಮಾಹಿತಿಯ ಪ್ರಕಾರ ಚಿಲ್ಲರೆ ದರ ಕೆಜಿಗೆ 30 ರೂ. ನಷ್ಟಿದೆ. ಆದರೆ ಪೂರೈಕೆ ಕಡಿಮೆಯಾಗಿರುವುದರಿಂದ ಹೊಸ ಬೆಳೆ ಬರುವವರೆಗೆ ಈರುಳ್ಳಿ ದರ ಹೆಚ್ಚಾಗಿರುತ್ತದೆ ಎನ್ನಲಾಗಿದೆ.