ನವದೆಹಲಿ: ದೇಶದಲ್ಲಿ ಕೋರೋನಾ ಎರಡನೆಯ ಅಬ್ಬರ ಜೋರಾಗಿದ್ದು, ಒಂದೇ ದಿನ ದಾಖಲೆಯ 1.15 ಲಕ್ಷ ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕೊರೊನಾ ಸೋಂಕು ಪ್ರಾರಂಭವಾದ ನಂತರ ಮೊದಲ ಬಾರಿಗೆ ದೇಶದಲ್ಲಿ ಶನಿವಾರದ ದೈನಂದಿನ ಪ್ರಕರಣಗಳ ಹಿಂದಿನ ದಾಖಲೆ ಹಿಂದಿಕ್ಕಿ 1,03,796 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈಗ ಮತ್ತೊಂದು ದಾಖಲೆಯಾಗಿದ್ದು ಒಂದೇ ದಿನದಲ್ಲಿ 115,000 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿವೆ.
ಮಂಗಳವಾರ ದೇಶದಲ್ಲಿ 1,15,320 ಜನರಿಗೆ ಸೋಂಕು ತಗುಲಿದೆ. ದೇಶದಲ್ಲೀಗ ಕೊರೋನಾ ಎರಡನೆಯ ಅಲೆ ಅಪಾಯಕಾರಿಯಾಗಿ ಪರಿಣಮಿಸಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗುತ್ತಿದೆ. ಸೋಂಕು ಹರಡುವ ವೇಗವನ್ನು ಗಮನಿಸಿದರೆ ಬುಧವಾರ ಮತ್ತೊಂದು ದಾಖಲೆ ಸೃಷ್ಟಿಯಾಗಬಹುದು ಎಂದು ಹೇಳಲಾಗಿದೆ.
ಅಮೆರಿಕ ಮತ್ತು ಬ್ರೆಜಿಲ್ ಮೀರಿಸಿ ದೈನಂದಿನ ಪ್ರಕರಣಗಳಲ್ಲಿ ಭಾರತ ಕೊರೋನಾ ಹಾಟ್ ಸ್ಪಾಟ್ ಆಗಿ ಪರಿಣಮಿಸಿದೆ. ಫೆಬ್ರವರಿ ಮೂರನೇ ವಾರದಲ್ಲಿ ಭಾರತದಲ್ಲಿ ಕೊರೋನಾ ಎರಡನೇ ಅಲೆ ಆರಂಭವಾಗಿದ್ದು, ದೇಶದೆಲ್ಲೆಡೆ ತೀವ್ರವಾಗಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಕೆಲವು ರಾಜ್ಯಗಳಲ್ಲಿ ಪರಿಸ್ಥಿತಿ ಕೈಮೀರಿದೆ. ಹಾಗಾಗಿ ನೈಟ್ ಕರ್ಫ್ಯೂ, ವಾರಾಂತ್ಯ ಲಾಕ್ ಡೌನ್ ಸೇರಿ ಅನೇಕ ಕಠಿಣ ನಿಯಮ ಜಾರಿಗೊಳಿಸಲಾಗಿದೆ.