ಅರಮನೆ ನಗರಿಯನ್ನೇ ಬೆಚ್ಚಿ ಬೀಳಿಸಿದ್ದ ಶೂಟೌಟ್ ಹಾಗೂ ದರೋಡೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ದರೋಡೆಕೋರರಿಗೆ ಪಿಸ್ತೂಲ್ ಮಾರಾಟ ಮಾಡಿದ್ದ ಮುಂಬೈ ಮೂಲದ ವ್ಯಕ್ತಿಯನ್ನು ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ.
ಬಂಧಿತ ವ್ಯಕ್ತಿಯನ್ನು ರಾಜನ್ ಎಂದು ಗುರುತಿಸಲಾಗಿದೆ. ಈತ ದರೋಡೆಕೋರರಿಗೆ 50 ಸಾವಿರ ರೂಪಾಯಿ ಪಿಸ್ತೂಲ್ ಮಾರಾಟ ಮಾಡಿದ್ದ. ಆಗಸ್ಟ್ 24ರಂದು ಮೈಸೂರಿನ ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ & ಸಿಲ್ವರ್ ಪ್ಯಾಲೇಸ್ನಲ್ಲಿ ಈ ಘಟನೆ ನಡೆದಿತ್ತು.
ಏಕಾಏಕಿ ಅಂಗಡಿಗೆ ನುಗ್ಗಿದ್ದ ದರೋಡೆಕೋರರು ಚಿನ್ನದಂಗಡಿಯ ಮಾಲೀಕನಿಗೆ ಚೆನ್ನಾಗಿ ಥಳಿಸಿದ್ದರು. ಮಾತ್ರವಲ್ಲದೇ ಅಂಗಡಿಗೆ ಬಂದಿದ್ದ ಚಂದ್ರು ಎಂಬವರ ಮೇಲೆ ಫೈರಿಂಗ್ ಮಾಡಿದ್ದರು. ಪರಿಣಾಮ ಚಂದ್ರು ಸ್ಥಳದಲ್ಲೇ ಸಾವಿಗೀಡಾಗಿದ್ದರು. ಚಿನ್ನಾಭರಣ ದೋಚಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಆದರೆ ಈ ಬೆಚ್ಚಿ ಬೀಳಿಸುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸಂಪೂರ್ಣವಾಗಿ ಸೆರೆಯಾಗಿತ್ತು.
ಈ ಸಂಬಂಧ ತನಿಖೆ ಕೈಗೆತ್ತಿಕ್ಕೊಂಡಿದ್ದ ಪೊಲೀಸರು ಈಗಾಗಲೇ ವಿವಿಧ ರಾಜ್ಯಗಳಲ್ಲಿ 7 ಮಂದಿಯನ್ನು ಬಂಧಿಸಿದ್ದಾರೆ. ಇದೀಗ ಪಿಸ್ತೂಲ್ ಮಾರಾಟ ಮಾಡಿದವನನ್ನೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.