ಹೈದರಾಬಾದ್: ಚಲಿಸುತ್ತಿರುವ ರೈಲಿನ ಮುಂದೆ ಇನ್‌ಸ್ಟಾಗ್ರಾಮ್ ರೀಲ್ ಶೂಟ್ ಮಾಡುವ ಕ್ರೇಜ್‌ನಿಂದ ಬಾಲಕನೊಬ್ಬ ತನ್ನ ಪ್ರಾಣವನ್ನು ಕಳೆದುಕೊಂಡಿರುವ ದುರ್ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಮೊಹಮ್ಮದ್ ಸರ್ಫ್ರಾಜ್ (16) ಮೃತಪಟ್ಟ ಹುಡುಗ. ಶುಕ್ರವಾರದ ಪ್ರಾರ್ಥನೆಗೆಂದು ಮೊಹಮ್ಮದ್ ಸರ್ಫ್ರಾಜ್ ಮನೆಯಿಂದ ತೆರಳಿದ್ದಾನೆ. ಒಂದೆರಡು ಗಂಟೆಗಳ ನಂತರ, ಅವನ ಇಬ್ಬರು ಸಹಪಾಠಿಗಳಾದ ಮುಝಮ್ಮಿಲ್ ಮತ್ತು ಸೊಹೈಲ್ ಮನೆಗೆ ಬಂದು ತಮ್ಮ ಪುತ್ರ ರೈಲ್ವೆ ಹಳಿಗಳ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದಾಗಿ ಮಾಹಿತಿ ನೀಡಿದ್ರು ಎಂದು ಬಾಲಕನ ತಂದೆ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಸರ್ಫ್ರಾಜ್ ಮತ್ತು ಸ್ನೇಹಿತರು ಇನ್ಸ್ಟಾಗ್ರಾಂ ರೀಲ್‌ಗಳನ್ನು ಮಾಡಲು ರೈಲ್ವೇ ಟ್ರ್ಯಾಕ್‌ನತ್ತ ತೆರಳಿದ್ದಾರೆ. ಈ ವೇಳೆ ಅವರು ಸಮೀಪಿಸುತ್ತಿರುವ ರೈಲಿನ ಮುಂದೆ ಟ್ರ್ಯಾಕ್‌ಗೆ ಹತ್ತಿರವಾಗಿ ಪೋಸ್ ನೀಡಿದ್ದಾರೆ.
ಸ್ನೇಹಿತರು ಸುರಕ್ಷಿತ ದೂರದಲ್ಲಿದ್ದರೆ, ಮೊಹಮ್ಮದ್ ಸರ್ಫ್ರಾಜ್ ಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪ್ರಾಪ್ತರು ಚಿತ್ರೀಕರಣಕ್ಕೆ ಬಳಸಿದ್ದ ಮೊಬೈಲ್ ಫೋನ್ ಅನ್ನು ಪೊಲೀಸರು ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಆರಕ್ಷಕರು ತನಿಖೆ ಆರಂಭಿಸಿದ್ದಾರೆ.
ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಹುಡುಗನ ಮೃತದೇಹವನ್ನು ರೈಲ್ವೆ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.