ಝೈದ್ ಖಾನ್ ನಟನೆಯ ‘ಕಲ್ಟ್’ ಚಿತ್ರ ಸದ್ಯ ಸ್ಯಾಂಡಲ್ವುಡ್ ನಲ್ಲಿ ಭರ್ಜರಿ ಸೌಂಡ್ ಮಾಡುತ್ತಿದ್ದು, ಇತ್ತೀಚಿಗಷ್ಟೇ ನಾಯಕಿಯನ್ನು ಪರಿಚಯಿಸಲಾಗಿತ್ತು. ಡಿಂಪಲ್ ಕ್ವೀನ್ ರಚಿತಾ ರಾಮ್ ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದು, ಇದೀಗ ಮತ್ತೊಬ್ಬ ನಾಯಕಿ ಸೇರ್ಪಡೆಯಾಗಿದ್ದಾರೆ. ‘ಉಪಾಧ್ಯಕ್ಷ’ ಖ್ಯಾತಿಯ ಮಲೈಕಾ ವಾಸು ಪಾಲ್ ಈ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರತಂಡ ಇಂದು ಮಲೈಕಾ ವಾಸುಪಾಲ್ ಅವರ ಪೋಸ್ಟರ್ ಒಂದನ್ನು ಹಂಚಿಕೊಳ್ಳುವ ಮೂಲಕ ಬರಮಾಡಿಕೊಂಡಿದೆ. ಈ ಕುರಿತು ಸಂತಸ ವ್ಯಕ್ತಪಡಿಸಿರುವ ನಟಿ ಮಲೈಕಾ ವಾಸು ಪಾಲ್ ಮತ್ತೊಂದು ಒಳ್ಳೆಯ ಪಾತ್ರ ನನಗೆ ಸಿಕ್ಕಿದ್ದು, ಇನ್ನು ಕಾಯಲಾರೆ ಎಂದಿದ್ದಾರೆ.
ಈ ಚಿತ್ರವನ್ನು ಅನಿಲ್ ಕುಮಾರ್ ನಿರ್ದೇಶಿಸಿದ್ದು, ಆಶ್ರಿತ್ ಸಿನಿಮಾಸ್ ಸಂಸ್ಥೆ ನಿರ್ಮಾಣ ಮಾಡಿದೆ, ಕೆ.ಎಂ. ಪ್ರಕಾಶ್ ಸಂಕಲನ, ರವಿವರ್ಮ ಅವರ ಸಾಹಸ ನಿರ್ದೇಶನ ಹಾಗೂ ಜೆ.ಎಸ್ ವಾಲಿ ಛಾಯಾಗ್ರಹಣವಿದ್ದು, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದಾರೆ. ಝೈದ್ ಖಾನ್ ಅವರಿಗೆ ಜೋಡಿಯಾಗಿ ರಚಿತಾ ರಾಮ್ ಹಾಗೂ ಮಲೈಕಾ ವಾಸು ಪಾಲ್ ಅಭಿನಯಿಸಲಿದ್ದಾರೆ.