ಬೆಂಗಳೂರು : ರಾಜ್ಯ ಸರ್ಕಾರಕ್ಕೆ ಮತ್ತೊಂದು ತಲೆನೋವು ಎದುರಾಗಿದ್ದು, ಬಾಕಿ ಪಾವತಿ ನೀಡುವಂತೆ ಸಿಡಿದೆದ್ದ ಗುತ್ತಿಗೆದಾರರು ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
20 ಸಾವಿರ ಕೋಟಿಗೂ ಅಧಿಕ ಬಿಲ್ ಪಾವತಿ ಬಾಕಿ ಇದ್ದು. ಶೇ 50 ರಷ್ಟು ಬಾಕಿ ಬಿಡುಗಡೆ ಮಾಡದೆ ಇದ್ದಲ್ಲಿ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಗುತ್ತಿಗೆದಾರರು ಎಚ್ಚರಿಕೆ ನೀಡಿದ್ದಾರೆ.
ಲೋಕೋಪಯೋಗಿ ಹೊರತಾಗಿ ಇತರ ಇಲಾಖೆಗಳಲ್ಲಿ ಶಿಫಾರಸು ತಂದವರಿಗೆ ಮಾತ್ರ ಬಿಲ್ ಪಾವತಿ ಆಗುತ್ತಿದೆ ಎಂದೂ ಆರೋಪ ಮಾಡಿದ್ದು, ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರು ಸಿಡಿದೆದ್ದಿದ್ದಾರೆ.
ಹೋರಾಟಕ್ಕೂ ಬಗ್ಗದೇ ಇದ್ದರೆ ಕಾಂಗ್ರೆಸ್ ಹೈಕಮಾಂಡ್ ಮತ್ತು ಪ್ರಧಾನಿ ನರೇಂದ್ರ ಮೋದಿಗೂ ಪತ್ರವನ್ನು ಬರೆಯುವ ಎಚ್ಚರಿಕೆಯನ್ನು ಡಿ ಕೆಂಪಣ್ಣ ನೀಡಿದ್ದಾರೆ. ಇದನ್ನೇ ಅಸ್ತ್ರವಾಗಿಸಿಕೊಂಡ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದೆ.
ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಲು ಗುತ್ತಿಗೆದಾರರ ಮೂಲಕ ಕಲೆಕ್ಷನ್ ಮಾಡಿಸಿ ಕರ್ನಾಟಕವನ್ನು ಲೂಟಿ ಮಾಡುತ್ತಿದೆ ನಾಡದ್ರೋಹಿ ಸಿದ್ದರಾಮಯ್ಯರ ಸರ್ಕಾರ ಎಂದು ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದೆ.