ಬೆಂಗಳೂರು : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2023-24 ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಸಮುದಾಯದ ಕ್ರೈಸ್ತರು, ಮುಸಲ್ಮಾನರು, ಜೈನರು, ಆಂಗ್ಲೋ ಇಂಡಿಯನ್ಸ್, ಬೌದ್ಧರು, ಸಿಖ್ಖರು ಮತ್ತು ಪಾರ್ಸಿ ಜನಾಂಗದವರಿಂಗ ಸಾಂತ್ವಾನ ಯೋಜನೆಯಡಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಈ ಯೋಜನೆಯಡಿ ವಿಶೇಷ ಹಾಗೂ ದುರ್ಬಲ ವರ್ಗದ ಫಲಾನುಭವಿಗಳಿಗೆ ರಾಜ್ಯದಲ್ಲಿ ಕೋಮುಗಲಭೆ ಮತ್ತು ಕೋಮು ಹಿಂಸಾಚಾರ ಸಂದರ್ಭದ್ಲಲಿ ಹಾಗೂ ಪರಿಸರ ವಿಕೋಪಗಳಿಂದ ವ್ಯಾಪಾರ ಕೇಂದ್ರಗಳು ಹಾಗೂ ವಾಸದ ಮನೆಗಳು ನಾಶ ಅಥವಾ ಹಾನಿಗೊಳಗಾಗಿದ್ದರೆ ಅಂತರ ಪ್ರಕರಣಗಳಲ್ಲಿ ಕನಿಷ್ಠ ರೂ. 2.00 ಲಕ್ಷ ನಷ್ಟವಾಗಿದ್ದರೆ ಮಾತ್ರ ಸಾಲ ಸೌಲಭ್ಯವನ್ನು ಒದಗಿಸಲಾಗುವುದು. ಸ್ವಂತ ಉದ್ಯೋಗವನ್ನು ಕೈಗೊಳ್ಳಲು ಗರಿಷ್ಠ ರೂ. 5.00 ಲಕ್ಷಗಳ ಘಟಕ ವೆಚ್ಚಕ್ಕೆ ಶೇ. 50% ರಷ್ಟು ಸಾಲವನ್ನು ಮತ್ತು ಶೇ. 50% ರಷ್ಟು ಸಹಾಯಧನವನ್ನು ನೀಡಲಾಗುವುದು. ಸಾಲವನ್ನು 60 ಸರಳ ಕಂತಿನಲ್ಲಿ ಶೇ. 3 ರ ಬಡ್ಡಿದರದಲ್ಲಿ ಮರುಮಾವತಿ ಮಾಡಬೇಕಾಗುತ್ತದೆ.
ಈ ಯೋಜನೆಯ ಸೌಲಭ್ಯ ಪಡೆಯಲು ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿದ್ದು, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಒಳಗಿರಬೇಕು. ಕುಟುಂಬದ ವಾರ್ಷಿಕ ಆದಾಯ ರೂ. 8.00 ಲಕ್ಷದೊಳಗಿರಬೇಕು. ಸಂತ್ರಸ್ತ ಫಲಾನುಭವಿಗಳು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದ ವರದಿಯನ್ನು ಪಡೆದಿರಬೇಕು. ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ/ರಾಜ್ಯ ಸರ್ಕಾರಿ ನೌಕರರಾಗಿರಬಾರದು. ಅರ್ಜಿದಾರರು ಅಥವಾ ಅವರ ಕುಟುಂಬದವರು ಕಳೆದು 5 ವರ್ಷಗಳಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಸಾಲ ಸೌಲಭ್ಯವನ್ನು ಪಡೆದಿರಬಾರದು (ಅರಿವು ಯೋಜನೆ ಹೊರತುಪಡಿಸಿ).
ಆಸಕ್ತರು ತಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಅರ್ಜಿದಾರರ ಬ್ಯಾಂಕ್ ಖಾತೆ ವಿವರ, ಅಫಿಡೆವಿಟ್ ಹಾಗೂ ಸಕ್ಷಮ ಪ್ರಾಧಿಕಾರದ ವರದಿಯೊಂದಿಗೆ ಅರ್ಜಿಯನ್ನು ಇಲಾಖೆಯ ವೆಬ್ಸೈಟ್ www.kmdconline.karnataka.gov.in ರಲ್ಲಿ ಸಲ್ಲಿಸುವಂತೆ ನಿಗಮದ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.