ರಾಜ್ಯ ಸರ್ಕಾರವು ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದು, ಕರ್ನಾಟಕ ರಾಜ್ಯ ಮಹಿಳಾ ಅಭಿವೃಧ್ಧಿ ನಿಗಮವು 2023-24ನೇ ಸಾಲಿನಲ್ಲಿ ಮಹಿಳಾ ತರಬೇತಿ ಯೋಜನೆಯಡಿ ನಿರುದ್ಯೋಗಿ ಮಹಿಳೆಯರಿಗೆ ವಿವಿಧ ರೀತಿಯ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ನೀಡಲು ಮಾನ್ಯತೆ ಪಡೆದ ಅರ್ಹ ಸ್ವಯಂ ಸೇವಾ ತರಬೇತಿ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ.
ತರಬೇತಿ ನೀಡುವ ಸಂಸ್ಥೆಯು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಲ್ಲಿ kaushalkar.com ವೆಬ್‍ಸೈಟ್‍ನಲ್ಲಿ ನೋಂದಣಿಯಾಗಿರಬೇಕು ಮತ್ತು ಕೇಂದ್ರ ಸರ್ಕಾರದ ಅಧೀನದಲ್ಲಿ ಅಕ್ರಿಡಿಟೇಶನ್ ಜಾಬ್ ರೋಲ್‍ಗಳಿಗೆ ಮಾನ್ಯತೆ ಪಡೆದಿರುವ ಸಂಸ್ಥೆಯಾಗಿರಬೇಕು. ತರಬೇತಿ ಸಂಸ್ಥೆಯು ತರಬೇತಿ ನೀಡಲು ಮೂಲಭೂತ ಸೌಕರ್ಯಗಳನ್ನು ಹೊಂದಿರಬೇಕು. ತರಬೇತಿ ನೀಡುವ ಚಟುವಟಿಕೆಗೆ ಸಂಬಂಧಿಸಿದಂತೆ ಸಂಸ್ಥೆಯವರು ಹೊಂದಿರುವ ಸ್ಥಳಾವಕಾಶದ ಮಾಹಿತಿ, ಯಂತ್ರೋಪಕರಣಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳ ಮಾಹಿತಿಯನ್ನು ಸಲ್ಲಿಸಬೇಕು. ತರಬೇತಿ ಸಂಸ್ಥೆಯು ಹೊಂದಿರುವ ಸ್ಥಳಾವಕಾಶ ಯಂತ್ರೋಪಕರಣಗಳ ಹಾಗೂ ಈ ಹಿಂದೆ ತರಬೇತಿ ನೀಡಿದ ಛಾಯಚಿತ್ರಗಳನ್ನು ಸಲ್ಲಿಸಬೇಕು.
ನೋಂದಣಿಯಾಗಿ ಅಕ್ರಿಡಿಟೇಶನ್ ಹೊಂದಿರುವ ತರಬೇತಿ ಸಂಸ್ಥೆಗಳು ಅಗತ್ಯ ದಾಖಲಾತಿಗಳೊಂದಿಗೆ ಪ್ರಸ್ತಾವನೆಯನ್ನು ದ್ವಿಪ್ರತಿಯಲ್ಲಿ ನವೆಂಬರ್ 27 ಸಂಜೆ 5 ರೊಳಗಾಗಿ ಎಸ್.ಪಿ.ಸರ್ಕಲ್ ಹತ್ತಿರದ ಮಹಿಳಾ ಪೋಲೀಸ್ ಠಾಣೆ ಪಕ್ಕದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.