ಬೆಂಗಳೂರು : ರಾಜ್ಯದ ಗ್ರಾಮೀಣ ಜನತೆಗೆ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದ್ದು, ಗ್ರಾಮೀಣ ಜನರ ಮನೆ ಬಾಗಿಲಿಗೆ ಉಚಿತ ಸೇವೆ ನೀಡುವ ಸಂಚಾರಿ ಆರೋಗ್ಯ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ವೋಲೋ ಗ್ರೂಪ್ ಮತ್ತು ನಾರಾಯಣ ಹೆಲ್ತ್ ಸಹಯೋಗದಲ್ಲಿ ಸಂಚಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವ ದಿನೇಶ್ ಗುಂಡೂರಾವ್, ಉತ್ತಮ ಆರೋಗ್ಯ ಸೌಲಭ್ಯ ಪಡೆಯುವುದು ಪ್ರತಿಯೊಬ್ಬರ ಹಕ್ಕು. ಗ್ರಾಮೀಣ ಭಾಗಗಳಿಗೂ ಗುಣಮಟ್ಟದ ವೈದ್ಯಕೀಯ ಸೌಲಭ್ಯ, ಸೇವೆ ತಲುಪಬೇಕೆಂಬ ಉದ್ದೇಶದಿಂದ ಸಂಚಾರಿ ಆರೋಗ್ಯ ಚಿಕಿತ್ಸಾ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ವೋಲ್ವೊ ಗ್ರೂಪ್ ಮತ್ತು ನಾರಾಯಣ ಹೆಲ್ತ್ ಸಹಯೋಗದೊಂದಿಗೆ ಜಾರಿಗೊಳಿಸಲಾಗುತ್ತಿರುವ ಸಂಚಾರಿ ವಾಹನವು ಜನರಿಗೆ ಕ್ಯಾನ್ಸರ್, ಹೃದಯ ಹಾಗೂ ರೋಗನಿರ್ಣಯ ಸಮಸ್ಯೆಗಳಿಗೆ ಆರೋಗ್ಯ ಸೇವೆಗಳನ್ನು ಉಚಿತವಾಗಿ ನೀಡಲಿದೆ. ಪರಿಣಿತ ವೈದ್ಯರ ಜೊತೆಗೆ ಎಕೋ, ಎಕ್ಸ್-ರೇ, ಅಲ್ಟ್ರಾಸೌಂಡ್ ಮ್ಯಾಮೊಗ್ರಾಮ್ ಸೇವೆಗಳು ಲಭ್ಯವಿರುವುದು ಈ ಸಂಚಾರಿ ವಾಹನದ ವಿಶೇಷತೆಯಾಗಿದೆ.
ಕಾರ್ಯಕ್ರಮದಲ್ಲಿ ನಾರಾಯಣ ಹೃದಯಾಲಯದ ನಿರ್ದೇಶಕಾರದ ಶ್ರೀ ದೇವಿ ಶೆಟ್ಟಿ ,ವೋಲ್ವೋ ಗ್ರೂಪ್ ನ ಮುಖ್ಯಸ್ಥರಾದ ಶ್ರೀ ಕಮಲ್ ಬಾಲಿ, ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಂಚಾರಿ ಆರೋಗ್ಯ ಕೇಂದ್ರದಲ್ಲಿ ಈ ಸೇವೆಗಳು ಉಚಿತ
ಎಕೋ
ಎಕ್ಸ್-ರೇ
ಅಲ್ಟ್ರಾಸೌಂಡ್ ಮ್ಯಾಮೊಗ್ರಾಮ್
ಕ್ಯಾನ್ಸರ್ ಸ್ಕ್ರೀನಿಂಗ್
ಹೃದಯ ಹಾಗೂ ರೋಗನಿರ್ಣಯ ಸಮಸ್ಯೆಗಳಿಗೆ ಉಚಿತ ಚಿಕಿತ್ಸೆಗಳನ್ನು ನೀಡಲಾಗುತ್ತದೆ.