ಬೆಂಗಳೂರು : ರಾಜ್ಯ ಸರ್ಕಾರವು ಅಲ್ಪಸಂಖ್ಯಾತ ಸಮುದಾಯಕ್ಕೆ ಮತ್ತೊಂದು ಭರ್ಜರಿ ಸಿಹಿಸುದ್ದಿ ನೀಡಿದ್ದು, ಸಾಂತ್ವನ ಯೋಜನೆಯಡಿ 5 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಸಿಗಲಿದೆ.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಆರಂಭಿಸಿರುವ ಸಾಂತ್ವನ ಯೋಜನೆಗೆ ಸಚಿವ ಜಮೀರ್ ಅಹ್ಮದ್ ಖಾನ್ ಚಾಲನೆ ನೀಡಿದ್ದು, ಪ್ರವಾಹ, ಅಗ್ನಿ ದುರಂತ, ಕೋಮುಗಲಭೆ ಹಾಗೂ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾಗುವ ಕುಟುಂಬಗಳಿಗೆ ನೆರವಾಗಲು ಸಾಂತ್ವನ ಯೋಜನೆ ಜಾರಿಗೆ ತರಲಾಗಿದೆ.
ಸಾಂತ್ವನ ಯೋಜನೆಯಡಿ 5 ಲಕ್ಷ ರೂ. ಸಾಲ ನೀಡಲಾಗುವುದು. ಈ ಪೈಕಿ ಶೇ. 50 ರಷ್ಟು 2.50 ಲಕ್ಷ ರೂ. ಸಾಲ, ಉಳಿದ 2.50 ಲಕ್ಷ ರೂ. ಸಬ್ಸಿಡಿ ದೊರೆಯಲಿದೆ. ಸಾಲಕ್ಕೆ ಶೇ.3 ಬಡ್ಡಿ ವಿಧಿಸಲಾಗುವುದು. ಈ ಹಣದಲ್ಲಿ ಸಂತ್ರಸ್ತ ಕುಟುಂಬಗಳು ವ್ಯಾಪಾರ ಅಥವಾ ಇತರೆ ಉದ್ಯೋಗದಲ್ಲಿ ತೊಡಗಬಹುದು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.