ಕೇಂದ್ರೀಯ ವಿಶ್ವವಿದ್ಯಾಲಯಗಳ ಪದವಿ ಮತ್ತು ಸ್ನಾತಕೋತರ ಪದವಿ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಖಾಲಿ ಉಳಿಯುವ ಸೀಟುಗಳಿಗೆ ವಿವಿಗಳೇ ಪ್ರವೇಶ ಪರೀಕ್ಷೆ ನಡೆಸಿ ದಾಖಲಾತಿ ನೀಡಬಹುದು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ ಹೇಳಿದೆ.
ಈ ಕುರಿತಂತೆ ಯುಜಿಸಿ ಅಧ್ಯಕ್ಷ ಎಂ. ಜಗದೀಶ್ ಕುಮಾರ್ ಮಾಹಿತಿ ನೀಡಿದ್ದು, ಕೇಂದ್ರೀಯ ವಿಶ್ವವಿದ್ಯಾಲಯಗಳ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ ಯು ಇ ಟಿ) ನಡೆಸಿ ಸೀಟು ಹಂಚಿಕೆ ಮಾಡಿದ ಬಳಿಕವೂ ಕೆಲ ಸೀಟುಗಳು ಖಾಲಿ ಇರುವುದು ಯುಜಿಸಿ ಗಮನಕ್ಕೆ ಬಂದಿದೆ ಎಂದಿದ್ದಾರೆ.
ಈ ಹಿನ್ನಲೆಯಲ್ಲಿ ಶೈಕ್ಷಣಿಕ ವರ್ಷ ಪೂರ್ತಿ ಸೀಟುಗಳನ್ನು ಖಾಲಿ ಇಡುವುದು ಸೂಕ್ತವಲ್ಲ ಎಂಬ ನಿರ್ಧಾರಕ್ಕೆ ಯುಜಿಸಿ ಬಂದಿದ್ದು, ಈ ರೀತಿ ಮಾಡಿದರೆ ಉನ್ನತ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಶಿಕ್ಷಣ ನಿರಾಕರಿಸಿದಂತಾಗುತ್ತದೆ. ಹೀಗಾಗಿ ವಿಶ್ವವಿದ್ಯಾಲಯಗಳೇ ಪ್ರವೇಶ ಪರೀಕ್ಷೆ ನಡೆಸಿ ದಾಖಲಾತಿ ಮಾಡಿಕೊಳ್ಳಬಹುದು. ಈ ಸಂದರ್ಭದಲ್ಲಿ ಪ್ರವೇಶ ಪರೀಕ್ಷೆ ಅಥವಾ ಅರ್ಹತಾ ಪರೀಕ್ಷೆಯ ಅಂಕಗಳೇ ಮಾನದಂಡವಾಗಿರುತ್ತವೆ ಎಂದು ಅವರು ಹೇಳಿದ್ದಾರೆ.