ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹಾಗೂ ಮಾಲಿನ್ಯ ನಿಯಂತ್ರಣ ಸಮಸ್ಯೆಗಳಿಗೆ ಪರಿಹಾರವಾಗಿ ರಾಷ್ಟ್ರ ರಾಜಧಾನಿ ಸೇರಿದಂತೆ ಮಹಾನಗರಗಳಲ್ಲಿ ಸಾರ್ವಜನಿಕ ಸಾರಿಗೆಯಾಗಿ ರಸ್ತೆಗಿಳಿದಿರುವುದು ಎಲೆಕ್ಟ್ರಿಕ್ ಬಸ್‌ಗಳು. ನೋಡಲು ಆಟಿಕೆ ಸಾಮಾನಿನಂತೆ ಅಚ್ಚುಕಟ್ಟಾಗಿ ಕಂಡರೂ, ಇದರಿಂದ ಹೆಚ್ಚು ದುರಂತಗಳು ಸಂಭವಿಸುತ್ತಿವೆ. ಉತ್ತರಪ್ರದೇಶದಲ್ಲಿ ಕಳೆದ ಒಂದೇ ತಿಂಗಳಲ್ಲಿ ಎರಡು ಎಲೆಕ್ಟ್ರಿಕ್ ಬಸ್‌ಗಳ ಅಪಘಾತವಾಗಿದೆ.
ಸದ್ಯ, ಕಾನ್ಪುರದಲ್ಲಿ 15ಕ್ಕೂ ಹೆಚ್ಚು ಜನರಿದ್ದ ಎಲೆಕ್ಟ್ರಿಕ್ ಚಾಲಿತ ಸಾರ್ವಜನಿಕ ಸಾರಿಗೆ ಬಸ್‌ವೊಂದು ಬ್ರೇಕ್ ವಿಫಲಗೊಂಡ ಕಾರಣ ಎದುರಿಗಿದ್ದ ಕಾರುಗಳು ಮತ್ತು ಬೈಕ್‌ಗಳಿಗೆ ಜೋರಾಗಿ ಗುದ್ದಿದೆ. ಪರಿಣಾಮ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ.
ಬಾರಾದೇವಿಯಿಂದ ತತ್‌ಮಿಲ್ ಕಡೆಗೆ ಬಸ್ ಸಂಚರಿಸುತ್ತಿತ್ತು ಎಂದು ತಿಳಿದುಬಂದಿದೆ.
ಕಳೆದ ಜನವರಿ 30ರಂದು ರೈಲ್ ಬಜಾರ್ ಪ್ರದೇಶದಿಂದ ತೆರಳಿದ್ದ ಎಲೆಕ್ಟ್ರಿಕ್ ಬಸ್, ವೇಗ ನಿಯಂತ್ರಿಸಲಾಗದೆಯೇ ಎದುರಿಗಿದ್ದ ಆಟೋ ರಿಕ್ಷಾ, ಕಾರು ಮತ್ತು ಟ್ರಾಫಿಕ್ ಬೂತ್‌ಗೆ ಅಪ್ಪಳಿಸಿತ್ತು. ಒಟ್ಟು ಆರು ಜನರು ಅಪಘಾತಕ್ಕೆ ಬಲಿಯಾಗಿದ್ದರು.
ಜಿಲ್ಲಾಡಳಿತವು ಅಪಘಾತ ಸಂಬಂಧ ಬಸ್‌ಗಳ ಕಾರ್ಯನಿರ್ವಹಣೆ, ಚಾಲಕರ ನಿರ್ಲಕ್ಷ್ಯ, ತರಬೇತಿ ಕೊರತೆ ವಿಚಾರಗಳನ್ನು ಒಳಗೊಂಡಂತೆ ಕೂಲಂಕಷ ತನಿಖೆಗೆ ಆದೇಶಿಸಿದೆ.