ರಾಯ್ ಪುರ: ಛತ್ತೀಸ್‌ಗಢದ ನಾರಾಯಣಪುರದಲ್ಲಿ ಬಿಜೆಪಿ ಬೆಂಬಲಿತ ಮಾಜಿ ಸರ್ಪಂಚ್ ನನ್ನು ಹತ್ಯೆ ಮಾಡಲಾಗಿದೆ. ಈ ಪ್ರದೇಶದಲ್ಲಿ ಬಿಜೆಪಿ ಮುಖಂಡ ಸಾಗರ್ ಸಾಹು ಇಬ್ಬರು ಅಪರಿಚಿತ ಪುರುಷರ ಗುಂಡಿಗೆ ಬಲಿಯಾದ 48 ಗಂಟೆಗಳ ನಂತರ ಈ ಘಟನೆ ವರದಿಯಾಗಿದೆ. ಈ ಮೂಲಕ ರಾಜ್ಯದಲ್ಲಿ ಕಳೆದ 7 ದಿನಗಳಲ್ಲಿ ಹತ್ಯೆಯಾದ ಬಿಜೆಪಿ ಬೆಂಬಲಿಗರ ಸಂಖ್ಯೆ ಮೂರಕ್ಕೆ ಏರಿದೆ.
ರಾತ್ರಿ 8 ಗಂಟೆಯ ಸುಮಾರಿಗೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸಾಗರ್ ಸಾಹು ಅವರ ಮನೆಗೆ ನುಗ್ಗಿ ಎರಡು ಗುಂಡುಗಳನ್ನು ಹಾರಿಸಿ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದಾಗ ದೂರದರ್ಶನ ವೀಕ್ಷಿಸುತ್ತಿದ್ದ ಸಾಹು ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಾರಾಯಣಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದರು. ಛೋಟೆಡೊಂಗರ್ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರ ದಾಳಿಯಲ್ಲಿ ಮತ್ತೊಬ್ಬ ಬಿಜೆಪಿ ಮುಖಂಡ ನೀಲಕಂಠ ಕಕ್ಕಂ ಸಾವನ್ನಪ್ಪಿದ ನಾಲ್ಕು ದಿನಗಳ ನಂತರ ಸಾಹು ಹತ್ಯೆಯಾಗಿದೆ. ಅವರು ಕುಕ್ಕಂ ಜಿಲ್ಲಾ ಬಿಜೆಪಿ ಮಂಡಲ ಅಧ್ಯಕ್ಷರಾಗಿದ್ದರು.
ಭಾನುವಾರದ ದಾಳಿಯಲ್ಲಿ ಮೃತಪಟ್ಟ ಬಿಜೆಪಿ ಮುಖಂಡನನ್ನು ಆ ಪ್ರದೇಶದಲ್ಲಿ ಸಕ್ರಿಯವಾಗಿರುವ ನಕ್ಸಲ್ ಗುಂಪುಗಳೊಂದಿಗೆ ನಂಟು ಹೊಂದಿರುವ ದುಷ್ಕರ್ಮಿಗಳು ಇರಿದು ಕೊಂದಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.