ಕೊಲ್ಕೊತ್ತಾ: ಪಶ್ಚಿಮ ಬಂಗಾಳದ ಕಲಿಯಗಂಜ್‌ನ ಬಿಜೆಪಿ ಶಾಸಕ ಸೌಮೆನ್ ರಾಯ್ ತೃಣಮೂಲ ಕಾಂಗ್ರೆಸ್‌ಗೆ ಮರಳಿದ ಒಂದು ದಿನದ ನಂತರ, ರಾಯಗಂಜ್‌ನ ಬಿಜೆಪಿ ಶಾಸಕ ಕೃಷ್ಣ ಕಲ್ಯಾಣಿ ಅವರು ಜಿಲ್ಲಾ ಬಿಜೆಪಿ ನಾಯಕರ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಪಕ್ಷದ ಮುಖಂಡರ ವಿರುದ್ಧ ಮುನಿಸಿಕೊಂಡಿರುವ ಅವರು ಬಿಜೆಪಿ ತೊರೆಯುವ ಸಾಧ್ಯತೆ ಇದೆ.
ಕೃಷ್ಣ ಕಲ್ಯಾಣಿ ಬಿಜೆಪಿಗೆ ಬದ್ಧತೆ ತೋರದಿದ್ದರೂ ಪಕ್ಷ ಬಿಡಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂಬ ವದಂತಿ ಹರಡಿದೆ. ಅವರು ನೀಡಿದ ಹೇಳಿಕೆಯಿಂದಾಗಿ ಶೀಘ್ರವೇ ಬಿಜೆಪಿಯಿಂದ ದೂರವಾಗಬಹುದು ಎಂದು ಹೇಳಲಾಗಿದೆ.
ಕೃಷ್ಣ ಕಲ್ಯಾಣಿಯವರ ತಂದೆ, ದಿವಂಗತ ದೀನ್ ದಯಾಳ್ ಕಲ್ಯಾಣಿ ಟಿಎಂಸಿ ನಾಯಕರಾಗಿದ್ದರು. ಟಿಎಂಸಿಯ ಮಾಜಿ ನಾಯಕ ಸುಭೇಂದು ಅಧಿಕಾರಿ ಮತ್ತು ರಾಜೀಬ್ ಬಂಡೋಪಾಧ್ಯಾಯ ಅವರೊಂದಿಗೆ ಕೃಷ್ಣ ಕಲ್ಯಾಣಿ ಉತ್ತಮ ಸಂಬಂಧ ಹೊಂದಿದ್ದರು. ಇಬ್ಬರೂ ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಟಿಎಂಸಿ ತೊರೆದ ನಂತರದಲ್ಲಿ ಕೃಷ್ಣ ಕಲ್ಯಾಣಿ ಅವರು ಕೂಡ ಬಿಜೆಪಿ ಸೇರಿದ್ದರು. ರಾಯಗಂಜ್ ನಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಜಯಗಳಿಸಿದ್ದರು.
ಕಳೆದ ಕೆಲವು ತಿಂಗಳುಗಳಿಂದ ಜಿಲ್ಲಾ ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸುತ್ತಿಲ್ಲ. ಜಿಲ್ಲಾ ಬಿಜೆಪಿ ಸಮಿತಿಯ ಅಧ್ಯಕ್ಷರು ಪಕ್ಷದ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ನನಗೆ ಮಾಹಿತಿ ನೀಡುತ್ತಿಲ್ಲ. ಇದರಿಂದ ನಾನು ಅವಮಾನಿತನಾಗಿದ್ದೇನೆ. ಬಿಜೆಪಿಯವರ ಯಾವುದೇ ಸಲಹೆ ಮಾರ್ಗದರ್ಶನವಿಲ್ಲದೆ ನನ್ನ ಕ್ಷೇತ್ರದಲ್ಲಿ ಜನರಿಗಾಗಿ ಕೆಲಸ ಮಾಡಲು ನಿರ್ಧರಿಸಿದ್ದೇನೆ. ಪ್ರಸ್ತುತ, ನಾನು ಬೇರೆ ಯಾವುದೇ ಪಕ್ಷಕ್ಕೆ ಸೇರಲು ಬಯಸುವುದಿಲ್ಲ ಎಂದು ಕೃಷ್ಣ ಕಲ್ಯಾಣಿ ತಿಳಿಸಿದ್ದಾರೆ.
ಉತ್ತರ ದಿನಜ್ ಪುರದ ಬಿಜೆಪಿ ಅಧ್ಯಕ್ಷ ಬಸುದೇವ್ ಸರ್ಕಾರ್, ಕೃಷ್ಣ ಕಲ್ಯಾಣಿ ಬಿಜೆಪಿ ಜಿಲ್ಲಾ ಸಮಿತಿ ಬಗ್ಗೆ ಮಾಡಿರುವ ಆರೋಪ ಆಧಾರರಹಿತವಾಗಿದೆ ಎಂದು ಹೇಳಿದ್ದು, ಪಕ್ಷದಲ್ಲಿ ನಮಗೆ ಅಂತಹ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ ಉತ್ತರ ದಿನಜ್ ಪುರ ಟಿಎಂಸಿ ಸಮಿತಿ ಅಧ್ಯಕ್ಷ ಕನೈಲಾಲ್ ಅಗರ್ವಾಲ್, ಟಿಎಂಸಿಗೆ ಸೇರುವ ಬಗ್ಗೆ ಕೃಷ್ಣ ಕಲ್ಯಾಣಿ ಅವರನ್ನು ಸಂಪರ್ಕಿಸಿಲ್ಲ ಎಂದು ಹೇಳಿದ್ದು, ಅಂತಹ ವಿಷಯ ಬಂದರೆ, ನಾವು ಜಿಲ್ಲಾ ಸಮಿತಿಯಲ್ಲಿ ಚರ್ಚಿಸುತ್ತೇವೆ. ಪ್ರಸ್ತಾವನೆಯನ್ನು ರಾಜ್ಯ ಪಕ್ಷದ ಸಮಿತಿಗೆ ಕಳುಹಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.