ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವೊಂದರ ಚಿಕಿತ್ಸೆಗೆ ಕೋಟ್ಯಾಂತರ ರೂಪಾಯಿ ಅಗತ್ಯವಿದ್ದು, ಇದನ್ನು ತಿಳಿದ ಹೆಸರು ಹೇಳಲಿಚ್ಚಿಸದ ಅನಾಮಧೇಯ ವ್ಯಕ್ತಿಯೊಬ್ಬರು ಬರೋಬ್ಬರಿ 15 ಕೋಟಿ ರೂಪಾಯಿಗಳನ್ನು ದೇಣಿಗೆಗಾಗಿ ನೀಡಿದ್ದಾರೆ.
ಮುಂಬೈನಲ್ಲಿ ವಾಸಿಸುತ್ತಿದ್ದ ಸಾರಂಗ್ ಮೆನನ್, ಮೆರೈನ್ ಇಂಜಿನಿಯರ್ ಆಗಿದ್ದು, ತಮ್ಮ ಪತ್ನಿ ಅದಿತಿ ನಾಯರ್ ಹಾಗೂ ಪುತ್ರ ನಿರ್ವಾಣ್ ಜೊತೆ ಕೇರಳಕ್ಕೆ ಸ್ಥಳಾಂತರಗೊಂಡಿದ್ದಾರೆ. ಇವರ ಪುತ್ರ ನಿರ್ವಾಣ್, ಸ್ಪೈನಲ್ ಮಸ್ಕ್ಯುಲರ್ ಎಟ್ರೋಫಿ (ಎಸ್ಎಂಎ) ಟೈಪ್ 2 ಎಂಬ ಕಾಯಿಲೆಯಿಂದ ಬಳಲುತ್ತಿದ್ದಾನೆ.
ಇದಕ್ಕೆ ಒಂದು ಬಾರಿ ಬಳಸುವ ಅಗತ್ಯ ಔಷಧದ ಬೆಲೆ 17.3 ಕೋಟಿ ರೂಪಾಯಿಗಳಾಗಿದ್ದು, ಅಲ್ಲದೆ ಅಮೆರಿಕದಿಂದ ಇದನ್ನು ತರಿಸಬೇಕಾಗುತ್ತದೆ. ಇಷ್ಟೊಂದು ದುಬಾರಿ ಮೊತ್ತವನ್ನು ಭರಿಸಲು ಸಾಧ್ಯವಾಗದ ದಂಪತಿ ಇದಕ್ಕಾಗಿ milaap.org ನಲ್ಲಿ ಕ್ರೌಡ್ ಫಂಡಿಂಗ್ ಪುಟವನ್ನು ಆರಂಭಿಸಲಾಗಿತ್ತು.
ಇದೀಗ ಹೆಸರು ಹೇಳಲು ಇಚ್ಚಿಸದ ಅನಾಮಧೇಯ ವ್ಯಕ್ತಿಯೊಬ್ಬರು 15.30 ಕೋಟಿ ರೂಪಾಯಿಗಳನ್ನು ಮಗುವಿನ ಚಿಕಿತ್ಸೆಗೆ ದೇಣಿಗೆಯಾಗಿ ನೀಡಿದ್ದು, ಈಗ ಇನ್ನುಳಿದ ಹಣವನ್ನು ಸಂಬಂಧಿಕರು ಮತ್ತು ಸ್ನೇಹಿತರ ಮೂಲಕ ಸಂಗ್ರಹಿಸಲು ದಂಪತಿ ನಿರ್ಧರಿಸಿದ್ದಾರೆ.