ಪಡಿತರ ವಿತರಕರಿಗೆ 5 ತಿಂಗಳಿಂದ ಕಮಿಷನ್ ಹಣ ಬಿಡುಗಡೆ ಮಾಡಿಲ್ಲ. ಸಾಗಾಣೆ ವೆಚ್ಚ, ಹಮಾಲಿ ವೆಚ್ಚವನ್ನು ಕೂಡ ನೀಡಿಲ್ಲ. ಹೀಗಾಗಿ ನ್ಯಾಯಬೆಲೆ ಅಂಗಡಿ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅನ್ನಭಾಗ್ಯ ಯೋಜನೆಯಡಿ ರಾಜ್ಯಾದ್ಯಂತ ಪಡಿತರ ಅಕ್ಕಿ ವಿತರಕರಿಗೆ ಕಮಿಷನ್ ಹಣ ನೀಡಿಲ್ಲ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಡಿತರ ವಿತರಕರು ಅಂಗಡಿಗಳ ಬಾಡಿಗೆ, ಕಾರ್ಮಿಕರ ವೇತನ, ಇತರ ಖರ್ಚು ಭರಿಸಲು ತೊಂದರೆ ಅನುಭವಿಸುವಂತಾಗಿದೆ.
ಪಡಿತರ ವಿತರಕರಿಗೆ ಈ ಮೊದಲು ಕ್ವಿಂಟಾಲ್ ಅಕ್ಕಿಗೆ 124 ರೂಪಾಯಿ ಕಮಿಷನ್ ನೀಡಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಅದನ್ನು 150 ರೂಪಾಯಿಗೆ ಹೆಚ್ಚಳ ಮಾಡಿದೆ. ಆದರೆ, 5 ತಿಂಗಳಿಂದ ವಿತರಕರ ಖಾತೆಗೆ ಹಣ ಜಮಾ ಆಗಿಲ್ಲ. ರಾಜ್ಯದಲ್ಲಿ 20,437 ನ್ಯಾಯ ಬೆಲೆ ಅಂಗಡಿಗಳಿಂದ 2,70,047 ಕ್ವಿಂಟಲ್ ಅಕ್ಕಿ ವಿತರಿಸಲಾಗುತ್ತದೆ. ಕಮಿಷನ್ ಹಣ ನಂಬಿ ಬದುಕು ಸಾಗಿಸುತ್ತಿರುವ ಪಡಿತರ ವಿತರಕರಿಗೆ ತೊಂದರೆಯಾಗಿದ್ದು, ಕೂಡಲೇ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡು ಕಮಿಷನ್ ಹಣ ಸಾಗಣೆ ವೆಚ್ಚ, ಹಮಾಲಿ ವೆಚ್ಚವನ್ನು ಬಿಡುಗಡೆ ಮಾಡಬೇಕೆಂದು ಪಡಿತರ ವಿತರಕರು ಮನವಿ ಮಾಡಿದ್ದಾರೆ.
ಪ್ರತಿ ಕಾರ್ಡ್ ಇ-ಕೆವೈಸಿ ಮಾಡಿಸಿದ ಶುಲ್ಕ 3 ರೂ. ಮೂರು ವರ್ಷಗಳಿಂದ ನೀಡಿಲ್ಲ. ಅದನ್ನು ಕೂಡ ನೀಡಬೇಕೆಂದು ಪಡಿತರ ವಿತರಕರು ಒತ್ತಾಯಿಸಿದ್ದಾರೆ.