ಬೆಂಗಳೂರು : ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಬದಲಾಗಿ ನೀಡುತ್ತಿರುವ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗದಿದ್ದರೆ ತಪ್ಪದೇ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡೆಯಲ್ಲಿ ಇಕೆವೈಸಿ ಕಡ್ಡಾಯವಾಗಿ ಪೂರ್ಣಗೊಳಿಸಿಕೊಳ್ಳಬೇಕು ಎಂದು ಆಹಾರ ಇಲಾಖೆ ಸೂಚನೆ ನೀಡಿದೆ.
ಈವರೆಗೂ ಇ-ಕೆವೈಸಿ ಮಾಡಿಸಿಕೊಳ್ಳದೇ ಇರುವ ರಾಜ್ಯದ ಯಾವುದೇ ಪಡಿತರ ಚೀಟಿದಾರರು ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡೆಯಲ್ಲಿ ಇಕೆವೈಸಿ ಕಡ್ಡಾಯವಾಗಿ ಪೂರ್ಣಗೊಳಿಸಿಕೊಳ್ಳಬೇಕು.
ಪಡಿತರ ಚೀಟಿದಾರರ ಖಾತೆಗೆ ನೇರವಾಗಿ ಹಣ ವರ್ಗಾವಣೆಗೆ ಸಂಬಂಧಿಸಿದಂತೆ, ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್‍ನೊಂದಿಗೆ ಬ್ಯಾಂಕಿನಲ್ಲಿ ಇಕೆವೈಸಿ ಮತ್ತು ಎನ್.ಪಿ.ಸಿ.ಐ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು, ಹಾಗೆಯೇ ಖಾತೆ ಹೊಂದಿರದ ಕಾರ್ಡುದಾರರು ರಾಷ್ಟ್ರೀಕೃತ ಬ್ಯಾಕ್‍ನಲ್ಲಿ ಹೊಸ ಖಾತೆ ಅಥವಾ ಅಂಚೆ ಇಲಾಖೆಯಲ್ಲಿ ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಖಾತೆಯನ್ನು ಮಾಡಿಸಿಕೊಳ್ಳಬೇಕು.
ಎಸ್.ಸಿ ಮತ್ತು ಎಸ್.ಟಿ ಕಾರ್ಡುದಾರರು ಕುಟುಂಬದ ಮಾಹಿತಿಯನ್ನು ನವೀಕರಿಸಲು ಪಡಿತರ ಚೀಟಿ ಮತ್ತು ಎ.ಜೆ.ಎಸ್.ಕೆ ವತಿಯಿಂದ ನೀಡಲಾದ ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯನ್ನು ನ್ಯಾಯಬೆಲೆ ಅಂಗಡಿಯಲ್ಲಿ ನೀಡಲು ಆಹಾರ ಇಲಾಖೆ ತಿಳಿಸಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಚೀಟಿದಾರರಿಗೆ ಸೆಪ್ಟೆಂಬರ್ ಮಾಹೆಗೆ ಅನ್ವಯವಾಗುವಂತೆ ಪಡಿತರ ಧಾನ್ಯವನ್ನು ಹಂಚಿಕೆ ಮಾಡಲಾಗಿದೆ. ಅಂತ್ಯೋದಯ ಪಡಿತರ ಚೀಟಿದಾರರಿಗೆ 21 ಕೆ.ಜಿ ಅಕ್ಕಿ ಮತ್ತು ರಾಗಿ 14 ಕೆ.ಜಿ ಪ್ರತಿ ಕಾರ್ಡ್‍ಗೆ, ಆದ್ಯತಾ ಹಾಗೂ ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ 3 ಕೆ.ಜಿ ಅಕ್ಕಿ ಮತ್ತು ಪ್ರತಿ ಸದಸ್ಯರಿಗೆ 2 ಕೆ.ಜಿ ರಾಗಿ ಉಚಿತವಾಗಿ ವಿತರಿಸಲಾಗುತ್ತದೆ. ಹಾಗೂ ಪ್ರತಿ ಕೆ.ಜಿ ಗೆ ರೂ.15 ರಂತೆ ಒಪ್ಪಿಗೆ ನೀಡಿದ ಎ.ಪಿ.ಎಲ್ ಏಕ ಸದಸ್ಯ ಪಡಿತರ ಚೀಟಿದಾರರಿಗೆ 5 ಕೆ.ಜಿ, ಎರಡು ಮತ್ತು ಹೆಚ್ಚಿನ ಸದಸ್ಯರನ್ನು ಹೊಂದಿರುವವರಿಗೆ 10 ಕೆ.ಜಿ ಅಕ್ಕಿಯನ್ನು ವಿತರಿಸಲಾಗುವುದು.