
ಬೆಂಗಳೂರು: ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಹೆಚ್ಚುವರಿ ಅಕ್ಕಿ ಬದಲಿಗೆ ನೀಡುವ 170 ರೂ. ನಗದು ವರ್ಗಾವಣೆ ಮೂರು ತಿಂಗಳಿನಿಂದ ಸ್ಥಗಿತವಾಗಿದೆ.
ಫಲಾನುಭವಿಗಳ ಖಾತೆಗೆ ನೇರವಾಗಿ ಸಂದಾಯವಾಗುತ್ತಿದ್ದ ಹೆಚ್ಚುವರಿ ಅಕ್ಕಿ ಹಣ ಜಮೆಯಾಗಿಲ್ಲ. ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವ 1.13 ಕೋಟಿ ಪಡಿತರ ಚೀಟಿದಾರರ ಕುಟುಂಬಗಳ ನಾಲ್ಕು ಕೋಟಿಗೂ ಅಧಿಕ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆಜಿ ಹೆಚ್ಚುವರಿ ಅಕ್ಕಿಗೆ 660 ಕೋಟಿ ರೂಪಾಯಿ ಈ ಜಮೆ ಮಾಡಲಾಗುತ್ತಿದೆ. ಆದರೆ, ಮಾರ್ಚ್, ಏಪ್ರಿಲ್, ಮೇ ತಿಂಗಳಿನಿಂದ ಹಣ ಇದುವರೆಗೂ ಜಮಾ ಮಾಡಿಲ್ಲ ಎಂದು ಹೇಳಲಾಗಿದೆ.
ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಗೆ ತಾಂತ್ರಿಕ ದೋಷ ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ಯಾವುದೇ ತೊಂದರೆ ಇಲ್ಲದೇ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗೆ ಮಾಸಿಕ ಎರಡು ಸಾವಿರ ರೂಪಾಯಿ ಜಮಾ ಮಾಡಲಾಗುತ್ತಿದೆ.