ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಆದ್ಯತಾ ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿ ಜೊತೆಗೆ ಉಳಿದ 5 ಕೆಜಿ ಅಕ್ಕಿ ಬದಲಿಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ. ಜುಲೈ 6 ರಿಂದಲೇ ಈ ಆದೇಶ ಅನ್ವಯ ವಾಗುತ್ತಿದೆ. ಪ್ರತಿ ಕೆಜಿಗೆ 34 ರೂಪಾಯಿಯಂತೆ ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗುತ್ತದೆ. ಕಳೆದ ಮೂರು ತಿಂಗಳು ಪಡಿತ ಪಡೆದ ಕುಟುಂಬಗಳೂ ಈ ಸೌಲಭ್ಯಕ್ಕೆ ಅರ್ಹರು.
ಪಡಿತರ ಚೀಟಿ ಹೊಂದಿರುವ ಕುಟುಂಬದಲ್ಲಿ 3 ಅಥವಾ 3ಕ್ಕಿಂತ ಹೆಚ್ಚು ಜನರಿದ್ದರೆ ಈಗಗಾಲೇ ಪ್ರತಿ ತಿಂಗಳು 35 ಕೆಜಿ ಆಹಾರ ಧಾನ್ಯ ಪಡೆಯುತ್ತಿರುವುದರಿಂದ ಅಂತಹ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿ ಕುಟುಂಬದವರಿಗೆ ನಗದು ಹಣ ವರ್ಗಾವಣೆ ಇರುವುದಿಲ್ಲ. ಆದರೆ ಅಂತ್ಯೋದಯ ಅನ್ನ ಯೋಜನೆಯ ಪಡಿತರ ಚೀಟಿ ಕುಟುಂಬದಲ್ಲಿ 4 ಸದಸ್ಯರ ಮೇಲ್ಪಟ್ಟವರಿಗೆ ಈ ಸೌಲಭ್ಯ ಅನ್ವಯವಾಗುತ್ತದೆ. ಕಳೆದ ಮೂರು ತಿಂಗಳಲ್ಲಿ ಪಡಿತರ ಧಾನ್ಯ ಪಡೆದುಕೊಂಡಿರುವ ಕುಟುಂಬಗಳು ನಗದು ವರ್ಗಾವಣೆ ಸೌಲಭ್ಯವನ್ನು ಪಡೆಯಲು ಅರ್ಹರಿದ್ದಾರೆ.
ಅಂತ್ಯೋದಯ ಅನ್ನ ಯೋಜನೆ ಹಾಗೂ ಆದ್ಯತಾ ಪಡಿತರ ಚೀಟಿಗಳಲ್ಲಿನ ಮುಖ್ಯಸ್ಥರು ಬ್ಯಾಂಕ್ ಖಾತೆ ತೆರೆಯದೇ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದೇ ಇರುವ ಮತ್ತು ಆಧಾರ್ ಸಂಖ್ಯೆ ತಪ್ಪಾಗಿ ಲಿಂಕ್ ಆಗಿರುವ ಫಲಾನುಭವಿಗಳ ಕುಟುಂಬಗಳ ಪಟ್ಟಿ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಲಭ್ಯವಿರುತ್ತದೆ. ಪಡಿತರದಾರರು ಈ ಪಟ್ಟಿಯನ್ನು ನೋಡಿ, ಪಡಿತರ ಚೀಟಿ ಮುಖ್ಯಸ್ಥರು ಬ್ಯಾಂಕ್ ಖಾತೆ ಹೊಂದಿಲ್ಲದಿದ್ದರೆ , ಬ್ಯಾಂಕ್ ಖಾತೆ ಜೊತೆ ಆಧಾರ್ ಜೋಡಿಸದಿದ್ದರೆ ಅಥವಾ ಬ್ಯಾಂಕ್ ಖಾತೆ ಮಾಹಿಇ ಬಗ್ಗೆ ಇದುವರೆಗೂ ಮಾಹಿತಿ ಲಭ್ಯವಾಗಿಲ್ಲದಿದ್ದರೆ ಬ್ಯಾಂಕ್ ಖಾತೆಯನ್ನು ಆಧಾರ್ ನೊಂದಿಗೆ ಜೋಡಣೆ ಮಾಡಿ, ಬ್ಯಾಂಕ್ ಖಾತೆ ಸಕ್ರೊಯಗೊಂಡ ಬಳಿಕ ಅಂತಹ ಕುಟುಂಬಗಳಿಗೆ ನೇರ ಹಣ ವರ್ಗಾವಣೆಯಾಗಲಿದೆ.
ಜುಲೈ 20ರೊಳಗೆ ತಮ್ಮ ಬ್ಯಾಂಕ್ ಖಾತೆ ಮಾಹಿತಿ ನೀಡಿದ ಪಡಿತರ ಕುಟುಂಬಗಳಿಗೆ ಆಗಸ್ಟ್ ನಲ್ಲಿ ನಗದು ಹಣ ವರ್ಗಾವಣೆ ಸೌಲಭ್ಯ ದೊರೆಯಲಿದೆ. ಇ-ಕೆವೈಸಿ ಮಾಡಿಸದೇ ಇರುವ ಪಡಿತರ ಚೀಟಿದಾರರಿಗೆ ಆಗಸ್ಟ್ ತಿಂಗಳಿಂದ ಆಹಾರಧಾನ್ಯ ಹಾಗೂ ನಗದು ವರ್ಗಾವಣೆ ತಾತ್ಕಾಲಿಕ ಸ್ಥಗಿತಗೊಳ್ಳಲಿದೆ. ಬಯೋಮೆರಿಕ್ ಪರಿಶೀಲನೆ ಬದಲು, ಮೊಬೈಲ್ ಒಟಿಪಿ ಮುಖಾಂತರ ಪಡಿತರ ಪಡೆಯುತ್ತಿರುವ ವ್ಯವಸ್ಥೆಯನ್ನು 2 ತಿಂಗಳ ಒಳಗೆ ಸ್ಥಗಿತಗೊಳಿಸಲಾಗುತ್ತಿದೆ ಎಂದು ತಿಳಿದುಬಂದಿದೆ.