ಬೆಂಗಳೂರು : ಪಡಿತರ ಚೀಟಿದಾರರಿಗೆ ಆಹಾರ ಇಲಾಖೆಯು ಮತ್ತೊಂದು ಸಿಹಿಸುದ್ದಿ ನೀಡಿದ್ದು, 75 ವರ್ಷ ದಾಟಿದವರ ಮನೆ ಬಾಗಿಲಿಗೆ ರೇಷನ್ ತಲುಪಿಸುವ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಆಹಾರ ಇಲಾಖೆಯಿಂದ ಮನೆ ಬಾಗಿಲಿಗೆ ಪಡಿತರ ಪೂರೈಸಲು ‘ಅನ್ನ ಸುವಿಧ’ ಆಯಪ್ ಅಭಿವೃದ್ಧಿಪಡಿಸಲಾಗಿದೆ. ಶೀಘ್ರವೇ ಮುಖ್ಯಮಂತ್ರಿಗಳು ಯೋಜನೆಗೆ ಚಾಲನೆ ನೀಡಲಿದ್ದಾರೆ.
ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿರುವ 90 ವರ್ಷ ಮೇಲ್ಪಟ್ಟ ವೃದ್ದರು, ಮನೆಯಲ್ಲಿ ಒಬ್ಬಂಟಿ ಇರುವ ವೃದ್ಧರು, ವಯಸ್ಸಾದವರು ಪಡಿತರ ಕೇಂದ್ರಗಳಿಗೆ ಹೋಗಲು ತೊಂದರೆ ಅನುಭವಿಸುತ್ತಿದ್ದಲ್ಲಿ ಅಂತವರ ಮನೆ ಬಾಗಿಲಿಗೆ ಪಡಿತರ ಪೂರೈಕೆ ಮಾಡಲು ಆಹಾರ ಇಲಾಖೆಯಿಂದ ಅನ್ನ ಸುವಿಧ ಆಯಪ್ ಅಭಿವೃದ್ಧಿಪಡಿಸಲಾಗಿದೆ.
ರಾಜ್ಯದಲ್ಲಿ ಈ ರೀತಿ ನ್ಯಾಯಬೆಲೆ ಅಂಗಡಿಗೆ ಹೋಗಲು ಸಾಧ್ಯವಾಗದೇ ತೊಂದರೆ ಅನುಭವಿಸುತ್ತಿರುವ 7 ಸಾವಿರ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಪ್ರಾಯೋಗಿಕವಾಗಿ 700 ಫಲಾನುಭವಿಗಳಿಗೆ ಮನೆ ಬಾಗಿಲಿಗೆ ಪಡಿತರ ಪೂರೈಕೆ ಮಾಡಲಾಗಿದೆ. ಯೋಜನೆಗೆ ಅನುಮತಿ ಕೋರಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತ ಕೂಡಲೇ ನವೆಂಬರ್ ನಿಂದ ಅಧಿಕೃತವಾಗಿ ಯೋಜನೆ ಜಾರಿಯಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಪಡಿತರ ಆಹಾರಧಾನ್ಯ ಉಚಿತವಾಗಿನೀಡುತ್ತಿದ್ದು, ಪ್ರತಿ ಮನೆಗೆ 50 ರೂಪಾಯಿ ಡೆಲಿವರಿ ಶುಲ್ಕ ನಿಗದಿಪಡಿಸುವ ಸಾಧ್ಯತೆ ಇದೆ. ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕಮಿಷನ್ ನೀಡುವ ಉದ್ದೇಶದಿಂದ ಶುಲ್ಕ ನಿಗದಿ ಮಾಡುವ ಚಿಂತನೆ ಇದೆ ಎಂದು ಹೇಳಲಾಗಿದೆ.
ನ್ಯಾಯಬೆಲೆ ಅಂಗಡಿಗೆ ಹೋಗಿ ಪಡಿತರ ಪಡೆಯಲು ಸಾಧ್ಯವಾಗದವರು ಅನ್ನ ಸುವಿಧ ಆಯಪ್ ನಲ್ಲಿ ನೀಡಿದ ವಿಳಾಸಕ್ಕೆ ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ಪೂರೈಸಿ ಫೋಟೋ ತೆಗೆದು ಮಾಹಿತಿ ಸಮೇತ ಅಪ್ಲೋಡ್ ಮಾಡಬೇಕಿದೆ. ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.