ಬೆಂಗಳೂರು: ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಹೆಚ್. ಆಂಜನೇಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಮನಿಗೆ ಹೋಲಿಸಿದ್ದು, ಅಯೋಧ್ಯೆಯ ರಾಮಮಂದಿರಕ್ಕೆ ಹೋಗಿ ಬಿಜೆಪಿಯ ರಾಮನನ್ನು ಏಕೆ ಪೂಜಿಸಬೇಕು ಎಂದು ಪ್ರಶ್ನಿಸಿದ್ದಾರೆ.
ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಕರ್ನಾಟಕದ ಸಿಎಂಗೆ ಏಕೆ ಆಹ್ವಾನ ನೀಡಿಲ್ಲ ಎಂಬ ಬಗ್ಗೆ ಸುದ್ದಿಗಾರರಿಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರೇ ರಾಮ. ಅಯೋಧ್ಯೆ ಮಂದಿರಕ್ಕೆ ಏಕೆ ಹೋಗಿ ಆ ರಾಮನನ್ನು ಪೂಜಿಸಬೇಕು ಎಂದು ಪ್ರಶ್ನಿಸಿದ್ದಾರೆ.
ಯತ್ನಾಳ್ ಆಕ್ರೋಶ
ಇಂತಹ ಮೂರ್ಖ, ಸ್ವಜನಪಕ್ಷಪಾತ, ಹಿಂದೂ ವಿರೋಧಿಗಳು ಈ ಹಿಂದೆ ರಾಜ್ಯದಲ್ಲಿ ಸಚಿವರಾಗಿದ್ದರು ಎಂಬುದು ರಾಜ್ಯದ ದೌರ್ಭಾಗ್ಯ ಎಂದು ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆಂಜನೇಯಪ್ಪನವರ ಪೂಜ್ಯ ದೇವರಾದ ಸಿದ್ದರಾಮಯ್ಯನವರ ಪೂಜೆ ಕಾರ್ಯಗಳು ಪ್ರತಿ ಮನೆಯಲ್ಲಿ ನಡೆಯಲಿ. ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ ಮತ್ತು ಘನತೆ ಮತ್ತು ಗೌರವದಿಂದ ವರ್ತಿಸಿ ಎಂದು ಯತ್ನಾಳ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನೂ ಆಹ್ವಾನ ಬಂದಿಲ್ಲ: ಸಿದ್ದರಾಮಯ್ಯ
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇಶದ ಹಲವಾರು ಪ್ರಮುಖ ವ್ಯಕ್ತಿಗಳು ಮತ್ತು ರಾಜಕೀಯ ನಾಯಕರನ್ನು ಈ ಮಹಾ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದೆ.
ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆಗೆ ಇನ್ನೂ ಆಹ್ವಾನ ಬಂದಿಲ್ಲ, ಆಹ್ವಾನ ಬಂದ ನಂತರ ಪರಿಗಣಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದರು.