ಕೊಪ್ಪಳ: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿ ಇಂದು ಹನುಮಮಾಲಾ ವಿಸರ್ಜನೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಹನುಮ ಭಕ್ತರು ಅಂಜನಾದ್ರಿ ಬೆಟ್ಟಕ್ಕೆ ಹರಿದು ಬರುತ್ತಿದ್ದಾರೆ.
ಅಂಜನಾದ್ರಿಯ ಆಂಜನೇಯ ದೇವಸ್ಥಾನದಲ್ಲಿ ಇಂದು ಹನುಮಮಾಲಾ ವಿಸರ್ಜೆನೆ ಹಿನ್ನೆಲೆಯಲ್ಲಿ ಹನುಮಮಾಲಾಧಾರಿಗಳು ಅಂಜನಾದ್ರಿಗೆ ಆಗಮಿಸುತ್ತಿದ್ದು, ಬೆಟ್ಟದಲ್ಲಿ ಭದ್ರತೆಗಾಗಿ ಹಾಗೂ ಮುಮ್ಜಾಗೃತಾ ಕ್ರಮವಾಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಮುಂಜಾನೆಯಿಂದಲೇ ಹನುಮಮಾಲಾಧಾರಿಗು ಅಂಜನಾದ್ರಿಗೆ ಆಗಮಿಸುತ್ತಿದ್ದು, 575 ಮೆಟ್ಟಿಲುಗಳನ್ನು ಹತ್ತಿ ಆಂಜನೇಯ ಸ್ವಾಮಿ ದರ್ಶನ ಪಡೆದು ಹನುಮಮಾಲೆಯನ್ನು ತೆಗೆಯಲಿದ್ದಾರೆ.
ಬೆಟ್ಟದ ಮುಂಭಾಗದಲ್ಲಿ ಭಕ್ತರ ಆಗಮನದಿಂದಾಗಿ ನೂಕುನುಗ್ಗಲು ಉಂಟಾಗಿದ್ದು, ಭಕ್ತರನ್ನು ನಿಯಂತ್ರಿಸಲು ಪೊಲಿಸರು ಹರಸಾಹಸಪಡುತ್ತಿದ್ದಾರೆ.
ರಾಮಾಯಣ ಕಾಲದ ಪುರಾನ ಹಿನ್ನೆಲೆಯುಳ್ಳ ಅಂಜನಾದ್ರಿ ಬೆಟ್ಟ, ಹನುಮಮಾಲೆ ವಿಸರ್ಜನೆ ಹಿನ್ನೆಲೆಯಲ್ಲಿ ಸಿಂಗಾರಗೊಂಡಿದ್ದು, ತಳಿರು ತೋರಣ, ದೀಪಾಲಂಕಾರ, ಕೇಸರಿ ದ್ವಜಗಳಿಂದ ಕಂಗೊಳಿಸುತ್ತಿದೆ.
ಚಾತುರ್ಮಾಸದಲ್ಲಿ ಹನುಮಮಾಲೆಯನ್ನು ಧರಿಸುವ ಭಕ್ತರು ಬಳಿಕ ಕಠಿಣ ವ್ರತಕೈಗೊಂಡು ಹನುಮಮಾಲೆಯನ್ನು ವಿಸರ್ಜಿಸಲು ಇಂದು ಅಂಜನಾದ್ರಿಗೆ ಆಗಮಿಸಿ, ಹನುಮನ ದರ್ಶನ ಪಡೆದು ಮಾಲೆ ವಿಸರ್ಜಿಸುತ್ತಾರೆ.