ಹೊಸಪೇಟೆ(ವಿಜಯನಗರ): ಅಂಜನೇಯ ಜನ್ಮಸ್ಥಳ ಅಂಜನಾದ್ರಿಯ ಬೆಟ್ಟದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ವಿಶೇಷ ಮುತುವರ್ಜಿ ವಹಿಸಿದ್ದು, ಇದರ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಪರಿಣಿತ ವಾಸ್ತುಶಿಲ್ಪತಜ್ಞರಿಂದ 15 ದಿನದೊಳಗೆ ನೀಲನಕ್ಷೆ ಸಿದ್ದಪಡಿಸಲಾಗುವುದು ಎಂದು ಪ್ರವಾಸೋದ್ಯಮ,ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಆನಂದಸಿಂಗ್ ಹೇಳಿದರು.
ನಗರದ ಒಳಾಂಗಣ ಕ್ರೀಡಾಂಗಣ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶೌಚಾಲಯ, ಸ್ನಾನಗೃಹ, ಪಾರ್ಕಿಂಗ್, ಪ್ರವಾಸಿಗರ ಕೊಠಡಿ, ವಾಣಿಜ್ಯ ಮಳಿಗೆಗಳು ಸೇರಿದಂತೆ ಇನ್ನೀತರ ಸೌಕರ್ಯಗಳನ್ನು ಒಳಗೊಂಡ ನೀಲನಕ್ಷೆಯನ್ನು ಸಿದ್ದಪಡಿಸಲಾಗುವುದು. ಮೊದಲ ಹಂತದಲ್ಲಿ ಇವುಗಳನ್ನು ಕೈಗೆತ್ತಿಕೊಳ್ಳಲಾಗುವುದು. ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಬಜೆಟ್ ನಲ್ಲಿ 100 ಕೋಟಿ ರೂ. ಮೀಸಲಿಟ್ಟಿದ್ದು, ಆ ಹಣವನ್ನು ಹಂತಹಂತವಾಗಿ ಹಣಕಾಸು ಇಲಾಖೆ ಒದಗಿಸಲಿದೆ. ಇನ್ನೂ ಹಣ ಅವಶ್ಯವಿದ್ದಲ್ಲಿ ಸರ್ಕಾರ ಒದಗಿಸಲಿದೆ. ಇದೇ 20 ರೊಳಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂಜನಾದ್ರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದರು.
ಭೂಸ್ವಾಧೀನಕ್ಕೆ ರೈತರ ಒಪ್ಪಿಗೆ: ಅಂಜನಾದ್ರಿ ಸಮಗ್ರ ಅಭಿವೃದ್ಧಿಪಡಿಸುವ ಉದ್ದೇಶದಿಂದ ಅಂಜನಾದ್ರಿ ಬೆಟ್ಟದ ಸುತ್ತಮುತ್ತಲಿನ 62 ಎಕರೆ ರೈತರ ಜಮೀನು ಭೂಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಅಂಜನೇಯನ ಮೇಲಿನ ಭಕ್ತಿ ಮತ್ತು ನಂಬಿಕೆಯಿಂದ ರೈತರು ಜಮೀನು ನೀಡಲು ಮುಂದೆ ಬಂದಿದ್ದಾರೆ. ರೈತರಿಗೆ ಪ್ರತಿ ಎಕರೆ ಜಮೀನಿಗೆ ಗರಿಷ್ಠ 42 ಲಕ್ಷ ರೂ. ಪರಿಹಾರ ನೀಡಲು ಉದ್ದೇಶಿಸಲಾಗಿದೆ. ಜಿಲ್ಲಾಡಳಿತದ ವತಿಯಿಂದಲೂ ರೈತರಿಗೆ ಈ ಕುರಿತು ಮನವರಿಕೆ ಮಾಡಿಕೊಡಲಾಗಿದೆ ಎಂದು ಹೇಳಿದರು.