ಬೆಂಗಳೂರು: ಹಾಲು ಕೊಡುವ ಹಸುಗಳಿಗೆ ನೀಡುತ್ತಿರುವ ವಿಮೆ ಸೌಲಭ್ಯವನ್ನು ಎತ್ತು, ಕುರಿ, ಹಂದಿ, ಮೊಲಗಳಿಗೆ ವಿಸ್ತರಿಸುವುದಾಗಿ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಯು.ಟಿ. ಖಾದರ್ ಪ್ರಶ್ನೆಗೆ ಸಚಿವರು, ಉತ್ತರ ನೀಡಿದ್ದು, ವಿಮಾ ಸಂಸ್ಥೆ ಗುರುತಿಸಲು ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. 14 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಮಲೆನಾಡು ಗಿಡ್ಡ ತಳಿಯ ರಾಷ್ಟ್ರಗಳನ್ನು ವಿಮೆಗೆ ಒಳಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಹಾಲು ಕೊಡುವ ರಾಸುಗಳಿಗೆ ನೀಡುವ ವಿಮೆ ಸೌಲಭ್ಯವನ್ನು ಎತ್ತು, ಕೋಣ, ಮೊಲ, ಹಂದಿ, ಕುರಿಗಳಿಗೂ ವಿಸ್ತರಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಬಸವಂತರಾಯ ದೊಡ್ಡಗೌಡರ ಪ್ರಶ್ನೆಗೆ ಸಚಿವ ಪ್ರಭು ಚೌಹಾಣ್ ಉತ್ತರ ನೀಡಿ, ರಾಜ್ಯದಲ್ಲಿ 100 ಪಶು ಚಿಕಿತ್ಸಾಲಯ ಆರಂಭಿಸಲು 2022 ಸಾಲಿನ ಬಜೆಟ್ ನಲ್ಲಿ ಘೋಷಿಸಲಾಗಿದ್ದು, 20 ಚಿಕಿತ್ಸಾಲಯ ಆರಂಭಕ್ಕೆ ಕಳೆದ ಮೇನಲ್ಲಿ ಆದೇಶ ಹೊರಡಿಸಲಾಗಿದೆ. 30 ಚಿಕಿತ್ಸಾಲಯ ಪ್ರಾರಂಭಿಸುವ ಪ್ರಸ್ತಾವನೆ ಆರ್ಥಿಕ ಇಲಾಖೆ ಪರಿಶೀಲನೆಯಲ್ಲಿದ್ದು, 50 ಪಶು ಚಿಕಿತ್ಸಾಲಯ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.