ಬೀದಿನಾಯಿಗಳಿಗೆ ಗೋಳು ಹೊಯ್ದುಕೊಂಡ ಸೆಕ್ಯುರಿಟಿ ಗಾರ್ಡ್ ಒಬ್ಬನನ್ನು ಯುವತಿ ನಿಂದಿಸಿ, ಥಳಿಸಿದ ಪ್ರಸಂಗ ಆಗ್ರಾದಲ್ಲಿ ನಡೆದಿದೆ. ಯುವತಿಯನ್ನು ಡಿಂಪಿ ಮಹೇಂದ್ರು ಎಂದು ಗುರುತಿಸಲಾಗಿದ್ದು, ಆಕೆ ಪ್ರಾಣಿ ಹಕ್ಕುಗಳ ಕಾರ್ಯಕರ್ತರಾಗಿದ್ದಾರೆ.
ವಿಡಿಯೋದಲ್ಲಿ, ಡಿಂಪಿಯವರು ಬಿಜೆಪಿ ಸಂಸದೆ ಮತ್ತು ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಮೇನಕಾ ಗಾಂಧಿ ಅವರಿಗೆ ದೂರು ನೀಡುವುದಾಗಿ ಸೆಕ್ಯುರಿಟಿ ಗಾರ್ಡ್ಗೆ ಬೆದರಿಕೆ ಹಾಕಿದ್ದಾರೆ. ಆ ಭದ್ರತಾ ಸಿಬ್ಬಂದಿ ನ್ಯೂ ಆಗ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್ಐಸಿ ಅಧಿಕಾರಿ ಕಾಲೋನಿಯಲ್ಲಿ ಕೆಲಸ ಮಾಡುತ್ತಾರೆ. ತಾನು ಮಾಜಿ ಸೈನಿಕನಾಗಿದ್ದು, ಬೀದಿ ನಾಯಿಗಳನ್ನು ಕಾಲೋನಿಯಿಂದ ಓಡಿಸಲು ಪ್ರಯತ್ನಿಸುತ್ತಿದ್ದೆ ಎಂದು ವಿಡಿಯೋದಲ್ಲಿ ಹೇಳಿರುವುದು ಕೇಳಿಬರುತ್ತಿದೆ.
ಆಗ್ರಾ ಪೊಲೀಸರು ವಿಡಿಯೋವನ್ನು ಗಮನಿಸಿ ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಎಂದು ಹೇಳಿಕೊಳ್ಳುವ ಯುವತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ಅಧೀಕ್ಷಕರು ಈ ಬಗ್ಗೆ ವಿವರಣೆ ನೀಡಿ, ಪೊಲೀಸರು ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ವಿವರಿಸಿದ್ದಾರೆ. ಗಾರ್ಡ್ ಅಖಿಲೇಶ್ ಸಿಂಗ್ ದೂರು ನೀಡಿದ್ದಾರೆ. ಕಾವಲುಗಾರನಿಗೆ ಥಳಿಸಿದ ಯುವತಿಯ ವಿವರಗಳನ್ನು ಪಡೆಯಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ.
ಡಿಂಪಿ ಕಳೆದ 15-18 ವರ್ಷಗಳಿಂದ ಪ್ರಾಣಿಗಳ ಮೇಲಿನ ಕ್ರೌರ್ಯದ ವಿರುದ್ಧ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ. ಎರಡ್ಮೂರು ದಿನಗಳ ಹಿಂದೆ ತನಗೆ ಕಾಲೋನಿಯಿಂದ ನಾಯಿಗಳ ಮೇಲಿನ ಕ್ರೌರ್ಯದ ಬಗ್ಗೆ ಕರೆ ಬಂದಿತ್ತು, ಆದರೆ ತಾನು ಊರಿನಲ್ಲಿಲ್ಲದ ಕಾರಣ ಬರಲು ಸಾಧ್ಯವಾಗಿರಲಿಲ್ಲ ಎಂದಿದ್ದಾರೆ.