
ಬೆಂಗಳೂರು: ಸೆಪ್ಟೆಂಬರ್ 21ರಿಂದ ರಾಜ್ಯಾದ್ಯಂತ ಜಾನುವಾರು ಗಣತಿ ನಡೆಸಲಾಗುವುದು ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ತಿಳಿಸಿದ್ದಾರೆ.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಹೆಬ್ಬಾಳ ಪಶುಪಾಲನಾ ಭವನ ಆವರಣದಲ್ಲಿ ಆಯೋಜಿಸಿದ್ದ ಜಾನುವಾರು ಗಣತಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ತಿಂಗಳಿಂದ ರಾಜ್ಯದಾದ್ಯಂತ 21ನೇ ಜಾನುವಾರು ಗಣತಿ ಕೈಗೊಳ್ಳಲಾಗುವುದು. ಇಲಾಖೆ ವತಿಯಿಂದ ಕೇಂದ್ರ ಪುರಸ್ಕೃತ ಯೋಜನೆಯಡಿ ಜಾನುವಾರು ಗಣತಿಯನ್ನು ಪ್ರತಿ ಐದು ವರ್ಷಗಳಿಗೊಮ್ಮೆ ನಡೆಸಲಾಗುವುದು. ಈ ಬಾರಿ 21ನೇ ಜಾನುವಾರು ಗಣತಿ 2024ರ ಸೆಪ್ಟೆಂಬರ್ 1ದರಿಂದ ಡಿಸೆಂಬರ್ 31ರವರೆಗೆ ರಾಜ್ಯಾದ್ಯಂತ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಜಾನುವಾರು ಗಣತಿಯ ಸಂದರ್ಭದಲ್ಲಿ ಜಾನುವಾರುಗಳ ತಳಿವಾರು, ಪ್ರಭೇದವಾರು, ಲಿಂಗವಾರು, ವಯೋವಾರು ಮಾಹಿತಿ ಕಲೆ ಹಾಕಲಾಗುವುದು ಎಂದು ಹೇಳಿದ್ದಾರೆ.