alex Certify ರೈತರಿಗೆ ಮುಖ್ಯ ಮಾಹಿತಿ: ಲಸಿಕೆ ಸೇರಿ ಜಾನುವಾರುಗಳ ರಕ್ಷಣೆಗೆ ಮಹತ್ವದ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಮುಖ್ಯ ಮಾಹಿತಿ: ಲಸಿಕೆ ಸೇರಿ ಜಾನುವಾರುಗಳ ರಕ್ಷಣೆಗೆ ಮಹತ್ವದ ಸೂಚನೆ

ಶಿವಮೊಗ್ಗ: ಜಿಲ್ಲಾ ಪಶುಪಾಲನಾ ಇಲಾಖೆಯು ರೈತರಿಗೆ ಹಾಗೂ ಜಾನುವಾರು ಸಾಕಾಣಿಕಾದಾರರಿಗೆ ಬಿಸಿಲಿನ ತಾಪದಲ್ಲಿ ಜಾನುವಾರುಗಳ ರಕ್ಷಣೆಗೆ ಹಲವು ಸಲಹೆ ಸೂಚನೆಗಳನ್ನು ನೀಡಿದೆ.

ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮವು ಏಪ್ರಿಲ್ 1 ರಿಂದ ಆರಂಭವಾಗಿದ್ದು, 30 ರವರೆಗೆ ನಡೆಯಲಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿರುವ ಅಂದಾಜು ಒಟ್ಟು 5,36,900 ಜಾನುವಾರುಗಳಲ್ಲಿ 3,08,841 ಜಾನುವಾರುಗಳಿಗೆ ಲಸಿಕೆ ಹಾಕಲಾಗಿರುತ್ತದೆ. ಲಸಿಕಾ ಕಾರ್ಯಕ್ರಮವು 30 ನೇ ಏಪ್ರಿಲ್ ವರೆಗೆ ಮುಂದುವರೆಯುವುದು.

ಎಲ್ಲಾ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ವಿರುದ್ಧ ಲಸಿಕೆ ಹಾಕಿಸಬೇಕು. ಈ ವರ್ಷ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಕೆಳಕಂಡ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದಲ್ಲಿ ಜಾನುವಾರುಗಳ ಆರೋಗ್ಯ ರಕ್ಷಣೆ ಹಾಗೂ ಹಾಲಿನ ಇಳುವರಿ ಕಾಪಾಡಲು ಅನುಕೂಲವಾಗುತ್ತದೆ

ಜಾನುವಾರುಗಳನ್ನು ಮುಂಜಾನೆ ಮತ್ತು ಸಾಯಂಕಾಲದ ಸಮಯದಲ್ಲಿ ಮೇಯಿಸಲು ಬಿಡಬೇಕು. ದಿನಕ್ಕೆ 2 ರಿಂದ 3 ಸಲ ಶುದ್ಧವಾದ ನೀರನ್ನು ಕುಡಿಸಬೇಕು. ಮಧ್ಯಾಹ್ನದ ಸಮಯದಲ್ಲಿ ಜಾನುವಾರುಗಳನ್ನು ಕೊಟ್ಟಿಗೆಯಲ್ಲಿ ಅಥವಾ ಗಿಡದ ನೆರಳಿನಲ್ಲಿ ಕಟ್ಟಬೇಕು.  ಜಾನುವಾರುಗಳಿಗೆ ದಿನದಲ್ಲಿ 1 ರಿಂದ 2 ಸಾರಿ ಮೈ ತೊಳೆಯಬೇಕು ಹಾಗೂ ಮಿಶ್ರ ತಳಿ ರಾಸು, ಎಮ್ಮೆಗಳಲ್ಲಿ ದೇಹದ ಉಷ್ಣತೆ ಕಾಪಾಡಲು ಗೋಣಿ ಚೀಲಗಳನ್ನು ನೀರಿನಲ್ಲಿ ತೋಯಿಸಿ ಮೈಮೇಲೆ ಹಾಕಬೇಕು.

ದನದ ಕೊಟ್ಟಿಗೆಯನ್ನು ತಂಪಾಗಿ ಇಡಲು ಕೊಟ್ಟಿಗೆಯ ಮೇಲೆ ತೆಂಗಿನ ಗರಿ, ಹುಲ್ಲನ್ನು ಹಾಕಿ, ಕಿಟಕಿಗಳಿಗೆ ಗೋಣಿಚೀಲಗಳನ್ನು ಕಟ್ಟಿ ನೀರನ್ನು ಸಿಂಪಡಿಸುತ್ತಿರಬೇಕು. ಜಮೀನು ಉಳುಮೆ ಮಾಡಲು ಎತ್ತುಗಳನ್ನು ಮುಂಜಾನೆ ಅಥವಾ ಸಾಯಂಕಾಲದ ಸಮಯದಲ್ಲಿ ಮಾತ್ರ ಕೆಲಸಕ್ಕೆ ಉಪಯೋಗಿಸಬೇಕು. ಹೈನು ರಾಸುಗಳಿಗೆ ಸಾಧ್ಯವಾದಷ್ಟು ಪೌಷ್ಟಿಕ ಆಹಾರ ಹಾಗೂ ಲಭ್ಯವಿರುವ ಹಸಿರು ಮೇವನ್ನು ಕೊಡಬೇಕು. ಪೌಷ್ಟಿಕ ಆಹಾರ ಅಥವಾ ಕುಡಿಯುವ ನೀರಿನಲ್ಲಿ ಲವಣ ಮಿಶ್ರಣ, ಉಪ್ಪು ಹಾಗೂ ಬೆಲ್ಲವನ್ನು ನಿಗದಿತ ಪ್ರಮಾಣದಲ್ಲಿ ನೀಡಬೇಕು.

ಜಾನುವಾರುಗಳಿಗೆ ಮುಂಜಾಗ್ರತೆಯಾಗಿ ಇಲಾಖೆಯಿಂದ ಉಚಿತವಾಗಿ ನೀಡುವ ಸಾಂಕ್ರಾಮಿಕ ರೋಗಗಳ ಲಸಿಕೆಗಳನ್ನು ಕಾಲಕಾಲಕ್ಕೆ ನಿಗದಿತ ಸಮಯದಲ್ಲಿ ಹಾಕಿಸಬೇಕು. ಜಂತುನಾಶಕ ಔಷಧಿಯನ್ನು ವರ್ಷದಲ್ಲಿ 2 ರಿಂದ 3 ಸಾರಿ ಕುಡಿಸಬೇಕು. ಯಾವುದೇ ಸಮಯದಲ್ಲಿ ಕಾಯಿಲೆಯಿಂದ ಬಳಲುವ ಜಾನುವಾರುಗಳಿಗೆ ಹತ್ತಿರದ ಪಶುವೈದ್ಯ ಸಂಸ್ಥೆಗಳಲ್ಲಿ ಚಿಕಿತ್ಸೆ ಕೊಡಿಸಬೇಕು.

ಬೇಸಿಗೆಯಲ್ಲಿ ಅಕಾಲಿಕ ಮುಂಗಾರು ಮಳೆಯ ಜೊತೆಗೆ ಸಿಡಿಲಾಘಾತ ಆಗುವ ಸಂಭವ ಹೆಚ್ಚಾಗಿರುವುದರಿಂದ ಜಾನುವಾರುಗಳ ಸಾವು ನೋವು ತಪ್ಪಿಸಲು ರೈತರು ತಮ್ಮ ವೈಯಕ್ತಿಕ ರಕ್ಷಣೆಯ ಜೊತೆಗೆ ಜಾನುವಾರುಗಳನ್ನು ಯಾವುದೇ ಕಾರಣಕ್ಕೂ ಗಿಡ, ಮರಗಳ ಕೆಳಗೆ ನಿಲ್ಲಿಸಬಾರದು. ಎತ್ತರ ಪ್ರದೇಶ(ಗುಡ್ಡ)ಗಳಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದರೆ ತಕ್ಷಣ ತಗ್ಗು ಪ್ರದೇಶಕ್ಕೆ ಸ್ಥಳಾಂತರಿಸಬೇಕು. ತಂತಿ ಬೇಲಿ, ವಿದ್ಯುತ್ ಕಂಬ, ಮೊಬೈಲ್/ಎಲಕ್ಟಿಕ್ ಟವರ್ ಮುಂತಾದವುಗಳ ಹತ್ತಿರ ಇರಬಾರದು. ಅದಾಗಿಯೂ ನೈಸರ್ಗಿಕ ವಿಕೋಪದಿಂದ ಜಾನುವಾರುಗಳು ಮರಣ ಹೊಂದಿದಲ್ಲಿ ತಕ್ಷಣವೇ ಕಂದಾಯ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆಗಳಿಗೆ ಮಾಹಿತಿ ನೀಡುವಂತೆ ಪಶುಪಾಲನಾ ಇಲಾಖೆ, ಉಪ ನಿರ್ದೇಶಕರು ರೈತರಿಗೆ ಮನವಿ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...