ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಮತ್ತೆ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನಕ್ಕೆ ಹಕ್ಕು ಸಾಧಿಸುವುದಾಗಿ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಸಚಿವ ಅನಿಲ್ ವಿಜ್ ಇಂದು ಹೇಳಿದ್ದಾರೆ.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ನಯಾಬ್ ಸಿಂಗ್ ಸೈನಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಪಕ್ಷವು ಈಗಾಗಲೇ ಸ್ಪಷ್ಟಪಡಿಸಿರುವ ಸಮಯದಲ್ಲಿ ಆರು ಬಾರಿ ಶಾಸಕರಾಗಿರುವ ಅನಿಲ್ ವಿಜ್ ಅವರಿಂದ ಮಹತ್ವದ ಹೇಳಿಕೆ ಬಂದಿದೆ.
ನಾನು ಇವತ್ತಿನವರೆಗೂ ಪಕ್ಷದಿಂದ ಏನನ್ನೂ ಕೇಳಿಲ್ಲ. ಹರಿಯಾಣದ ಜನರು ನನ್ನನ್ನು ಭೇಟಿಯಾಗಲು ಬರುತ್ತಿದ್ದಾರೆ. ಅಂಬಾಲದಲ್ಲಿಯೂ ಜನರು ನನ್ನನ್ನು ಹಿರಿಯರು ಎಂದು ಹೇಳುತ್ತಾರೆ. ನಾನು ಏಕೆ ಸಿಎಂ ಆಗಲಿಲ್ಲ. ಜನರ ಬೇಡಿಕೆ ಮತ್ತು ಆಧಾರದ ಮೇಲೆ ಹಿರಿತನದ ಹಿನ್ನೆಲೆಯಲ್ಲಿ, ಈ ಬಾರಿ ನಾನು ಮುಖ್ಯಮಂತ್ರಿಯಾಗಲು ಹಕ್ಕನ್ನು ಹೊಂದುತ್ತೇನೆ ಎಂದು ವಿಜ್ ಹೇಳಿದ್ದಾರೆ.
ಪಕ್ಷ ನನ್ನನ್ನು ಮಾಡಲಿ ಬಿಡಲಿ ಅವರಿಗೆ ಬಿಟ್ಟದ್ದು. ಆದರೆ ಅವರು ನನ್ನನ್ನು ಸಿಎಂ ಮಾಡಿದರೆ, ನಾನು ಹರಿಯಾಣದ ‘ತಕ್ದೀರ್ ಮತ್ತು ತಸ್ವೀರ್’ (ಹರಿಯಾಣದ ಮುಖ ಮತ್ತು ಹಣೆಬರಹ) ಬದಲಾಯಿಸುತ್ತೇನೆ ಎಂದು ಅಂಬಾಲಾ ಕ್ಯಾಂಟ್ ಶಾಸಕರಾದ ವಿಜ್ ಹೇಳಿದ್ದಾರೆ.
ನಾನು ಪಕ್ಷದ ಹಿರಿಯ ಶಾಸಕ. ಆರು ಚುನಾವಣೆಗಳಲ್ಲಿ ಗೆದ್ದಿದ್ದೇನೆ ಮತ್ತು ನನ್ನ ಏಳನೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ನಾನು ಎಂದಿಗೂ ನನ್ನ ಪಕ್ಷದಿಂದ ಏನನ್ನೂ ಕೇಳಿಲ್ಲ ಎಂದರು.
ಸೈನಿ ಅವರನ್ನು ಈಗಾಗಲೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿದೆ ಎಂದು ಹೇಳಿದಾಗ, ಹಕ್ಕು ಮಂಡಿಸುವುದಕ್ಕೆ ಯಾವುದೇ ಅಡ್ಡಿ ಇಲ್ಲ. ನಾನು ನನ್ನ ಹಕ್ಕು ಮಂಡಿಸುತ್ತೇನೆ ಎಂದು ಹೇಳಿದ್ದಾರೆ.