ಮುಂಬೈ: ಇತ್ತೀಚೆಗೆ ಮುಂಬೈ ಪೊಲೀಸ್ ಆಯುಕ್ತರ ಹುದ್ದೆಯಿಂದ ವರ್ಗಾವಣೆ ಆಗಿರುವ ಪರಮ್ ಬಿರ್ ಸಿಂಗ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದಿರುವ ಪತ್ರವೊಂದು ಮಹಾರಾಷ್ಟ್ರದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
ಗೃಹಸಚಿವ ಅನಿಲ್ ದೇಶಮುಖ್ ಅವರು ಇತ್ತೀಚೆಗೆ ಎನ್ಐಎಯಿಂದ ಬಂಧಿತರಾಗಿರುವ ಸೂಪರ್ ಕಾಪ್ ಸಚಿನ್ ವಾಜೆ ಅವರಿಗೆ ತಿಂಗಳಿಗೆ 100 ಕೋಟಿ ರೂಪಾಯಿ ಸಂಗ್ರಹಿಸಿ ಕೊಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಗೃಹಸಚಿವ ಅನಿಲ್ ದೇಶಮುಖ್ ಕೆಲವು ತಿಂಗಳುಗಳಲ್ಲಿ ತಮ್ಮ ಅಧಿಕೃತ ನಿವಾಸಕ್ಕೆ ಅನೇಕ ಬಾರಿ ಸಚಿನ್ ವಾಜೆ ಅವರನ್ನು ಕರೆಸಿಕೊಂಡು ಹಣ ಸಂಗ್ರಹಿಸಿ ಕೊಡುವಂತೆ ಪದೇಪದೇ ಸೂಚನೆ ನೀಡಿರುವುದಾಗಿ ಪರಮ್ ಬಿರ್ ಬಿರ್ ಸಿಂಗ್ ಪತ್ರದಲ್ಲಿ ಆರೋಪ ಮಾಡಿದ್ದಾರೆ.
ಮುಂಬೈ ಪೋಲಿಸ್ ಅಪರಾಧ ವಿಭಾಗದ ಅಪರಾಧ ಗುಪ್ತಚರ ಘಟಕದ ಮುಖ್ಯಸ್ಥರಾಗಿದ್ದ ಸಚಿನ್ ವಾಜೆ ಅವರನ್ನು ಗೃಹ ಸಚಿವರು ಅನೇಕ ಸಲ ಮನೆಗೆ ಕರೆಸಿಕೊಂಡಿದ್ದರು. ಮುಂಬೈನಲ್ಲಿ ಸುಮಾರು 1750 ಬಾರ್ ಅಂಡ್ ರೆಸ್ಟೋರೆಂಟ್ ಗಳಿವೆ. ಪ್ರತಿಯೊಂದರಿಂದ ತಲಾ ಎರಡರಿಂದ ಮೂರು ಲಕ್ಷ ರೂಪಾಯಿ ಸಂಗ್ರಹಿಸಿದಲ್ಲಿ ಮಾಸಿಕ 40 ರಿಂದ 50 ಕೋಟಿ ರೂಪಾಯಿ ಸಂಗ್ರಹಿಸಬಹುದು. ಹೀಗೆ ವಿವಿಧ ಮೂಲಗಳಿಂದ ಹಣ ಸಂಗ್ರಹಿಸಿ ತಿಂಗಳಿಗೆ 100 ಕೋಟಿ ರೂಪಾಯಿ ಕೊಡುವಂತೆ ಗೃಹ ಸಚಿವರು ಬೇಡಿಕೆ ಇಟ್ಟಿದ್ದರು ಎಂದು ಪತ್ರ ಬರೆಯಲಾಗಿದೆ.