ಚಿಕ್ಕಮಗಳೂರು: ಮಹಿಳೆಯರ ಗುಂಪೊಂದು ಮದ್ಯದಂಗಡಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮುಸ್ಲಾಪುರ ಗ್ರಾಮದಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗಳು ಭಾರಿ ವೈರಲ್ ಆಗಿವೆ.
ಮದ್ಯದಂಗಡಿ ತೆರೆಯುವುದನ್ನು ವಿರೋಧಿಸಿದ ಮಹಿಳೆಯರ ಗುಂಪೊಂದು ಮದ್ಯದಂಗಡಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದೆ.
ಈ ಹಿಂದೆ ಎರಡು ಬಾರಿ ಗ್ರಾಮದಲ್ಲಿ ಮದ್ಯದಂಗಡಿ ತೆರೆಯುವುದಕ್ಕೆ ಮಹಿಳೆಯರು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಕೂಡ ಮದ್ಯದಂಗಡಿ ತೆರೆಯಲಾಗಿತ್ತು. ಹೀಗಾಗಿ ಸುತ್ತಮುತ್ತಲ ಗ್ರಾಮಗಳ ಸುಮಾರು 50 ಮಹಿಳೆಯರು ಹಾಗೂ ಸ್ಥಳೀಯರ ನೆರವಿನೊಂದಿಗೆ ಮದ್ಯದಂಗಡಿ ಬಂದ್ ಮಾಡಲು ನಿರ್ಧರಿಸಿದ್ದಾರೆ.
ಬಾರ್ ತೆರೆಯಲು ಅವಕಾಶ ಮಾಡಿಕೊಟ್ಟರೆ ತಮ್ಮ ಗಂಡಂದಿರು ಎಲ್ಲವನ್ನೂ ಮದ್ಯಕ್ಕೆ ಖರ್ಚು ಮಾಡುತ್ತಾರೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮದ್ಯದಂಗಡಿಯನ್ನು ಮುಚ್ಚುವಂತೆ ಮಹಿಳೆಯರು ಒತ್ತಾಯಿಸಿದ್ದಾರೆ. ಆದರೆ ಅವರು ಒಪ್ಪದಿದ್ದಾಗ ಮದ್ಯದಂಗಡಿ ಒಳಗೆ ನುಗ್ಗಿ ಮೇಜು-ಕುರ್ಚಿಗಳು ಹಾಗೂ ಇತರೆ ಮೂಲಸೌಕರ್ಯಗಳನ್ನು ಒಡೆದು ಹಾಕಿದ್ದಾರೆ.
ಗುಂಪು ಒಳಗೆ ನುಗ್ಗುವ ಮೊದಲು ಮದ್ಯದ ಬಾಟಲಿಗಳನ್ನು ಸ್ಥಳಾಂತರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.