Video | ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ; ಸ್ಪಂದಿಸದಿದ್ದಕ್ಕೆ ಅಧಿಕಾರಿಗೆ ‘ಕಪಾಳ ಮೋಕ್ಷ’ 12-09-2024 9:40AM IST / No Comments / Posted In: Latest News, India, Live News ಮಧ್ಯಪ್ರದೇಶದ ದಾತಿಯಾದಲ್ಲಿ ನಡೆದ ಗಲಾಟೆಯೊಂದರಲ್ಲಿ ಕೋಪೋದ್ರಿಕ್ತ ಮಹಿಳೆಯೊಬ್ಬರು ಎಸ್‌ಡಿಎಂ (ಉಪ-ಜಿಲ್ಲಾ ಮ್ಯಾಜಿಸ್ಟ್ರೇಟ್) ಕಪಾಳಕ್ಕೆ ಹೊಡೆದಿದ್ದಾರೆ. ಆಕೆ ಮತ್ತು ಆಕೆಯ ಸಮುದಾಯದವರು ಜಾತಿ ಪ್ರಮಾಣ ಪತ್ರಕ್ಕಾಗಿ ಪದೇ ಪದೇ ಮನವಿ ಮಾಡಿದ್ದು, ಉಪವಾಸ ಸತ್ಯಾಗ್ರಹದ ಹೊರತಾಗಿಯೂ ಮನವಿ ನಿರ್ಲಕ್ಷಿಸಿದ ನಂತರ ಕಪಾಳಮೋಕ್ಷ ಮಾಡಿದ್ದಾರೆ. ದಾತಿಯಾದ ಭಂದರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಜಗಳ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಪ್ರತಿಭಟನಾಕಾರರು ಮತ್ತು ಅಧಿಕಾರಿಗಳ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ ಮಹಿಳೆಯೊಬ್ಬರು ಎಸ್‌ಡಿಎಂ ಅವರ ಕಾಲರ್ ಹಿಡಿದು ಕಪಾಳಮೋಕ್ಷ ಮಾಡಿದರು. ಮಾಹಿತಿ ಪ್ರಕಾರ ಪ್ರತಿಭಟನಾಕಾರರಾದ ಪ್ರಜಾಪತಿ ಸಮುದಾಯದವರು, ಒಂದು ವಾರದಿಂದ ಪರಿಶಿಷ್ಟ ಜಾತಿ ಸ್ಥಾನಮಾನ ಮತ್ತು ಜಾತಿ ಪ್ರಮಾಣಪತ್ರವನ್ನು ನೀಡುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಪೊಲೀಸರು ಮತ್ತು ಆಡಳಿತವು ಗುಂಪನ್ನು ಚದುರಿಸಲು ಪ್ರಯತ್ನಿಸಿದಾಗ ಉದ್ವಿಗ್ನತೆ ಹೆಚ್ಚಾಯಿತು. ಗೊಂದಲದ ಸಮಯದಲ್ಲಿ ಎಸ್‌ಡಿಎಂ ಶರ್ಮಾ ಅವರನ್ನು ಹಿಂಬದಿಯಿಂದ ಮಹಿಳೆಯೊಬ್ಬರು ಹಿಡಿದು ಕಪಾಳಮೋಕ್ಷ ಮಾಡಿದರು. ಸ್ಥಳದಲ್ಲಿದ್ದ ಎಸ್ ಡಿಒಪಿ ಕಾರ್ಣಿಕ್ ಶ್ರೀವಾಸ್ತವ ಮಧ್ಯ ಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು. ಈ ಬಗ್ಗೆ ಪೊಲೀಸರು ಮತ್ತು ಪುರಸಭೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ. ಪ್ರತಿಭಟನಾಕಾರರು ಬಳಸುತ್ತಿದ್ದ ಅಕ್ರಮ ವಿದ್ಯುತ್ ಸಂಪರ್ಕವನ್ನೂ ಅಧಿಕಾರಿಗಳು ಕಡಿತಗೊಳಿಸಿದ್ದಾರೆ. ಇದಕ್ಕೆ ಕಾರಣರಾದವರನ್ನು ಗುರುತಿಸಿ ಶೀಘ್ರವೇ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಸ್‌ಡಿಒಪಿ ತಿಳಿಸಿದ್ದಾರೆ. #WATCH | Datia: Angry Woman Slaps SDM After Her Community’s Repeated Requests For Caste Certificate Go Unheard#MPNews #MadhyaPradesh pic.twitter.com/LzRYMq9POT — Free Press Madhya Pradesh (@FreePressMP) September 11, 2024