ಕೆಲ ಸಮಯದ ಹಿಂದಷ್ಟೇ ಮಹಿಳೆಯೊಬ್ಬರು ತಮ್ಮ ಆಸ್ತಿಯನ್ನು ರಿಕ್ಷಾ ಚಾಲಕನಿಗೆ ನೀಡಿದ ಸುದ್ದಿಯೊಂದು ಭಾರೀ ಸದ್ದು ಮಾಡಿತ್ತು. ಇದೀಗ ಇಂತದ್ದೇ ಮಾದರಿಯ ಘಟನೆಯೊಂದು ಆಗ್ರಾದಲ್ಲಿ ನಡೆದಿದೆ.
83 ವರ್ಷದ ವೃದ್ಧರೊಬ್ಬರು ತಮ್ಮ 2.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿದ್ದಾರೆ.
ಗಣೇಶ್ ಶಂಕರ್ ಪಾಂಡೆ ಎಂಬ ವೃದ್ಧನ ಹಿರಿಯ ಪುತ್ರ ಆಸ್ತಿಗೆ ಉತ್ತರಾಧಿಕಾರಿಯಾಗಬೇಕೆಂಬ ದುರುದ್ದೇಶದಿಂದ ತನಗೆ ಹಿಂಸೆ ನೀಡಿದ್ದಾನೆ. ಹೀಗಾಗಿ ಈ ರೀತಿಯ ಕ್ರಮ ಕೈಗೊಂಡಿರೋದಾಗಿ ಗಣೇಶ್ ಶಂಕರ್ ಪಾಂಡೆ ಹೇಳಿದ್ದಾರೆ.
ತಂಬಾಕು ವ್ಯಾಪಾರ ಮಾಡುತ್ತಿದ್ದ ಪಾಂಡೆ ಸಿಟಿ ಮ್ಯಾಜಿಸ್ಟ್ರೇಟ್ ಪ್ರತಿಪಾಲ್ ಸಿಂಗ್ ತಮ್ಮ ವಿಲ್ ಪ್ರತಿಯನ್ನು ಹಸ್ತಾಂತರಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಗಣೇಶ್ ಶಂಕರ್ ಪಾಂಡೆ ನಾನು ಪೀಪಲ್ ಮಂಡಿಯಲ್ಲಿರುವ ನನ್ನ 250 ಚದರ ಯಾರ್ಡ್ನ ಮನೆಯನ್ನು ನನ್ನ ಮರಣದ ನಂತರ ಜಿಲ್ಲಾಡಳಿತಕ್ಕೆ ವರ್ಗಾಯಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ ಗಣೇಶ್ ಶಂಕರ್ ಪಾಂಡೆ ಬರೋಬ್ಬರಿ 25 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸರ್ಕಾರದ ಹೆಸರಿಗೆ ನೀಡುತ್ತಿದ್ದಾರೆ ಎನ್ನಲಾಗಿದೆ.
ನನ್ನ ಮನೆಯಲ್ಲಿ ಹಿರಿಯ ಮಗ ದಿಗ್ವಿಜಯ್, ಆತನ ಪತ್ನಿ ಹಾಗೂ ಇಬ್ಬರು ಮಕ್ಕಳು ವಾಸವಿದ್ದಾರೆ. ಇವರು ನಿರಂತರವಾಗಿ ನನ್ನ ಬಳಿ ಆಸ್ತಿ ನೀಡುವಂತೆ ಪೀಡಿಸುತ್ತಿದ್ದಾರೆ. ಇದರಿಂದ ನನಗೆ ಅತಿಯಾದ ತೊಂದರೆಯಾಗುತ್ತಿದೆ. ನನ್ನ ಮಗ ನನಗೆ ಗೌರವ ನೀಡುತ್ತಿಲ್ಲ. ಅಲ್ಲದೇ ನನ್ನೊಂದಿಗೆ ಅನೇಕ ಬಾರಿ ಅನುಚಿತವಾಗಿ ವರ್ತಿಸಿದ್ದಾನೆ. ಆಸ್ತಿಯನ್ನು ನನ್ನಿಂದ ಕಸಿಯಲು ಯತ್ನಿಸುತ್ತಿದ್ದಾನೆ. ಹೀಗಾಗಿ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ನನ್ನ ಮರಣದ ನಂತರ ಸರ್ಕಾರ ನನ್ನ ಆಸ್ತಿಯನ್ನು ಬಳಕೆ ಮಾಡಲು ಜಿಲ್ಲಾಡಳಿತಕ್ಕೆ ಅವಕಾಶ ನೀಡಬೇಕು. ನನ್ನನ್ನು ನಾನು ನೋಡಿಕೊಳ್ಳಲು ಬೇಕಾದಷ್ಟು ಹಣ ನನ್ನಲ್ಲಿ ಇದೆ ಎಂದಿದ್ದಾರೆ.