ರೆಸ್ಟೋರೆಂಟ್‍ನಿಂದ ಏನಾದರೂ ಪಾರ್ಸೆಲ್ ತೆಗೆದುಕೊಂಡರೆ ಎಡವಟ್ಟುಗಳು ಸಂಭವಿಸೋದು ಸಹಜ. ಹಾಗಂತ ಕೋಪದಲ್ಲಿ ಸಿಬ್ಬಂದಿಗೆ ತೊಂದರೆ ಮಾಡುವುದು ಸರಿಯಲ್ಲ. ಆದರೆ, ಇಲ್ಲೊಂದೆಡೆ ಅಮಾನವೀಯ ಘಟನೆ ನಡೆದಿದ್ದು, ಗ್ರಾಹಕಿ ತೋರಿದ ವರ್ತನೆಗೆ ನೆಟ್ಟಿಗರು ಕೆಂಡಕಾರಿದ್ದಾರೆ.
ರೆಸ್ಟೋರೆಂಟ್ ಒಂದರಲ್ಲಿ ಮಸಾಲೆಯುಕ್ತ ಬಿಸಿ ಸೂಪ್ ಪಾರ್ಸೆಲ್ ತೆಗೆದುಕೊಂಡ ಮಹಿಳೆಯೊಬ್ಬಳು ಕೌಂಟರ್ ಬಳಿ ಬಂದು ಮ್ಯಾನೇಜರ್ ಜೊತೆ ತಗಾದೆ ತೆಗೆದಿದ್ದಾಳೆ. ಬಿಸಿ ಮೆಕ್ಸಿಕನ್ ಮೆನುಡೊ ಸೂಪ್‌ನಿಂದಾಗಿ ಪ್ಯಾಕೇಜ್‌ನ ಮುಚ್ಚಳವು ಕರಗಿದೆ ಎಂದು ಮ್ಯಾನೇಜರ್ ಜೊತೆ ವಾಗ್ವಾದ ನಡೆಸಿದ್ದಾಳೆ. ಇದಕ್ಕೆ ಮ್ಯಾನೇಜರ್ ಆಕೆಯ ಹಣವನ್ನು ವಾಪಸ್ ಮಾಡಿದ್ದಾರೆ. ಅಷ್ಟಕ್ಕೂ ಸುಮ್ಮನಿರದ ಗ್ರಾಹಕಿ ಮತ್ತಷ್ಟು ಜಗಳವಾಡಿದ್ದಕ್ಕೆ, ಮ್ಯಾನೇಜರ್ ಹೊರಹೋಗುವಂತೆ ಸೂಚಿಸಿದ್ದಾರೆ.
ಹೊಂದಾಣಿಕೆಯಾಗದ ರಕ್ತ; ಸಾವನ್ನಪ್ಪಿದ ಮಹಿಳೆ
ಇದರಿಂದ ಕೋಪಗೊಂಡ ಗ್ರಾಹಕಿ ಮಸಾಲೆಯುಕ್ತ ಬಿಸಿ ಸೂಪ್ ಅನ್ನು ಮ್ಯಾನೇಜರ್ ಮುಖಕ್ಕೆ ಎಸೆದು ತನ್ನ ಸಹಚರನೊಂದಿಗೆ ಹೊರನಡೆದಿದ್ದಾಳೆ. ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಅಮೆರಿಕಾದ ಟೆಕ್ಸಾಸ್ ನ ರೆಸ್ಟೋರೆಂಟ್ ಒಂದರಲ್ಲಿ ನವೆಂಬರ್ 7ರಂದು ಈ ಘಟನೆ ನಡೆದಿದೆ.
ಈ ಬಗ್ಗೆ ವಿವರಿಸಿರುವ ಮ್ಯಾನೇಜರ್ ಬ್ರೋಲ್ಯಾಂಡ್, ಮಸಾಲೆಯುಕ್ತ ಬಿಸಿ ಸೂಪ್ ಅನ್ನು ಮುಖಕ್ಕೆ ಎರಚಿದಾಗ ಕಣ್ಣು ತೆರೆಯಲಾಗದೆ ಭಾರಿ ಕಷ್ಟಪಟ್ಟರಂತೆ. ಸೂಪ್ ಮೂಗಿನವರೆಗೆ ಹೋಗಿದ್ದರಿಂದ ರಕ್ತಸ್ರಾವಕ್ಕೆ ಕೂಡ ಕಾರಣವಾಯಿತು. ಅದೃಷ್ಟವಶಾತ್, ಘಟನೆ ಸಂಭವಿಸುವ ಹೊತ್ತಿಗೆ ಸೂಪ್ ಕೊಂಚ ತಣ್ಣಗಾಗಿತ್ತು, ಹೀಗಾಗಿ ಮುಖಕ್ಕೆ ಯಾವುದೇ ಗಾಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಕಾನೂನು ಜಾರಿ ಅಧಿಕಾರಿಗಳ ಪ್ರಕಾರ, ಮಹಿಳೆ ಮತ್ತು ಆಕೆಯ ಸಹಚರ ಕಠಿಣ ಆರೋಪಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದೆ. ವರದಿಗಳ ಪ್ರಕಾರ, ಘಟನೆಯ ವಿಡಿಯೋ ವೈರಲ್ ಆದ ನಂತರ, ಮಹಿಳೆ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಡಿಆಕ್ಟೀವೇಟ್ ಮಾಡಿದ್ದಾಳಂತೆ.