ತನ್ನ ಮನೆಯಲ್ಲಿ ಪದೇ ಪದೇ ವಿದ್ಯುತ್ ಕಡಿತಗೊಂಡಿದ್ದರಿಂದ ಬೇಸತ್ತ ವ್ಯಕ್ತಿಯೊಬ್ಬ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಫಡ್ನವೀಸ್ ರ ನಾಗ್ಪುರ ನಿವಾಸದಲ್ಲಿ ಬಾಂಬ್ ಇರುವುದಾಗಿ ಹೇಳಿದ ಈ ವ್ಯಕ್ತಿ ಮಹಾರಾಷ್ಟ್ರದ ಕನ್ಹಾನ್ ಪಟ್ಟಣದ ಬಳಿಯ ಊರಿನವರಾಗಿದ್ದಾರೆ. 30 ವರ್ಷದ ಈ ಕರೆದಾರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಹುಸಿ ಬಾಂಬ್ ಕರೆಗಳನ್ನು ನಾಗ್ಪುರ ಪೊಲೀಸ್ ನಿಯಂತ್ರಣ ಕೊಠಡಿ ಸ್ವೀಕರಿಸಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಕೇಳಿದಾಗ ಆತ ಕರೆಯನ್ನು ಡಿಸ್‌ಕನೆಕ್ಟ್ ಮಾಡಿದ್ದಾನೆ. ಕರೆ ಬಂದ ಮಾರ್ಗವನ್ನು ಟ್ರೇಸ್ ಮಾಡಿದ ಪೊಲೀಸರು ಆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಕರೆ ಬಂದ ಕೂಡಲೇ ಬಾಂಬ್ ಶೋಧ ಹಾಗೂ ನಿಷ್ಕ್ರಿಯ ದಳವನ್ನು ನಗರದ ಧರಂಪೇಟ್ ನ ತ್ರಿಕೋನಿ ಪಾರ್ಕ್ ಬಳಿ ಇರುವ ಫಡ್ನವೀಸ್ ನಿವಾಸಕ್ಕೆ ಕಳುಹಿಸಲಾಗಿತ್ತು. ಫಡ್ನವೀಸ್ ಮನೆಯ ಒಳ-ಹೊರಗೆಲ್ಲಾ ತೀವ್ರವಾಗಿ ಶೋಧಿಸಲಾಯಿತಾದರೂ ಯಾವುದೇ ಸ್ಫೋಟಕ ಕಂಡು ಬಂದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫಡ್ನವೀಸ್ ಹಾಗೂ ಅವರ ಕುಟುಂಬ ಸದ್ಯ ಮುಂಬೈಯಲ್ಲಿ ಇದೆ.
ಪದೇ ಪದೇ ಮನೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದ್ದ ಕಾರಣ ಸಿಟ್ಟಿಗೆದ್ದ ಈ ವ್ಯಕ್ತಿ, ಇದೇ ಆವೇಶದಲ್ಲಿ ಹೀಗೆ ಮಾಡಿದ್ದಾನೆ.