ಭಾರತದ ಬೀದಿ-ಬೀದಿಗಳಲ್ಲಿ ನಾವು ಪ್ರಾಣಿಗಳನ್ನು ನೋಡಬಹುದು. ನಾಯಿ, ಬೆಕ್ಕು, ಹಂದಿ, ಮಂಗ ಹೀಗೆ ಅನೇಕ ಪ್ರಾಣಿಗಳಿರುತ್ತವೆ. ಕೆಲವೊಮ್ಮೆ ಈ ಪ್ರಾಣಿಗಳು ಮನುಷ್ಯನಿಗೆ ಅಪಾಯ ತರುತ್ತವೆ.
ಬೀದಿ ನಾಯಿಗಳ ದಾಳಿಗೆ ಅನೇಕರು ಸಾವನ್ನಪ್ಪಿದ್ದಾರೆ. ಪ್ರವಾಸಿ ತಾಣಗಳಲ್ಲಿ ಹೆಚ್ಚಾಗಿ ಕಂಡು ಬರುವ ಮಂಗಗಳು ಕೂಡ ಮನುಷ್ಯರ ಮೇಲೆ ಅನೇಕ ಬಾರಿ ದಾಳಿ ನಡೆಸಿದ ಉದಾಹರಣೆಯಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗನಿಂದ ವ್ಯಕ್ತಿಯೊಬ್ಬನ ಪ್ರಾಣ ಹೋಗಿದೆ.
ಮನೆ ಮೇಲೆ ಕುಳಿತಿದ್ದ ಮಂಗ, ಇಟ್ಟಿಗೆಯನ್ನು ಎಸೆದಿದೆ. ದುರಾದೃಷ್ಟವಶಾತ್ ಕೆಳಗೆ ರಸ್ತೆಯಲ್ಲಿ ಹೋಗ್ತಿದ್ದ ವ್ಯಕ್ತಿ ತಲೆಗೆ ಇಟ್ಟಿಗೆ ಬಿದ್ದು, ಗಾಯವಾಗಿ ಆತ ಸಾವನ್ನಪ್ಪಿದ್ದಾನೆ.
ಸಾವನ್ನಪ್ಪಿದ ವ್ಯಕ್ತಿ ಹೆಸರು ಮೊಹಮ್ಮದ್ ಕುರ್ಬನ್. ಮಂಗ ಓಂ ಪ್ರಕಾಶ್ ಎಂಬಾತನ ಮನೆ ಮೇಲಿತ್ತು. ಮಂಗದಿಂದ ಟ್ಯಾಂಕ್ ಗಳನ್ನು ರಕ್ಷಿಸಲು ಮನೆ ಮೇಲೆ ಇಟ್ಟಿಗೆಗಳನ್ನು ಇಡಲಾಗಿತ್ತು. ಮಂಗ, ಮೊಹಮ್ಮದ್ ಕುರ್ಬನ್ ಗುರಿಯಾಗಿಸಿಕೊಂಡು ಇಟ್ಟಿಗೆ ಎಸೆದಿಲ್ಲ ಎನ್ನಲಾಗಿದೆ. ಮಂಗ ಎರಡು ಇಟ್ಟಿಗೆ ಎಸೆದಿತ್ತು. ಅದ್ರಲ್ಲಿ ಒಂದು ಇಟ್ಟಿಗೆ ಮೊಹಮ್ಮದ್ ಕುರ್ಬನ್ ತಲೆಗೆ ತಾಗಿದೆ. ಇನ್ನೊಂದು ಇಟ್ಟಿಗೆ ಪಕ್ಕದ ಮನೆ ಮೇಲೆ ಬಿದ್ದಿದೆ. ಆ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ.