ಆಕ್ರೋಶದಲ್ಲಿದ್ದ ಆನೆಯೊಂದು ರಸ್ತೆ ಬದಿಯಲ್ಲಿ ನಿಂತಿದ್ದ ವಾಹನವನ್ನ ತಳ್ಳಿ, ಪಲ್ಟಿ ಹೊಡೆಸಿರುವ ಘಟನೆ ದಕ್ಷಿಣ ಆಫ್ರಿಕಾದ ಐಸಿಮಂಗಲಿಸೊ ವೆಟ್ಲ್ಯಾಂಡ್ ಪಾರ್ಕ್ನಲ್ಲಿ ನಡೆದಿದೆ. ಆ ಕ್ಷಣದಲ್ಲಿ ಅಲ್ಲಿದ್ದ ಮತ್ತೊಂದು ವಾಹನದ ಪ್ರಯಾಣಿಕರು ಈ ಘಟನೆಯ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ನಾಲ್ಕು ಜನರ ಕುಟುಂಬವೊಂದು ವಾಹನದೊಳಗೆ ಕುಳಿತಿತ್ತು, ಕೋಪಗೊಂಡ ಆನೆಯು ಏಕಾಏಕಿ ಆ ವಾಹನವನ್ನ ತಳ್ಳಿ ಮಗುಚಿ ಹಾಕಿದೆ. ಅವರ ಹಿಂದೆಯೇ ನಿಂತಿದ್ದ ಕಾರಿನಲ್ಲಿದ್ದವರು ಆನೆಯನ್ನು ವಿಚಲಿತಗೊಳಿಸಲು, ಭಯಭೀತರಾಗಿದ್ದರೂ ಹಾರ್ನ್ ಮಾಡುತ್ತಾ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಜನವರಿ 16 ರಂದು ಜುಲುಲ್ಯಾಂಡ್ ಅಬ್ಸರ್ವರ್ ಹೆಸರಿನ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೊವನ್ನು ಅಪ್ಲೋಡ್ ಮಾಡಲಾಗಿದೆ.
ಕಾರಿನೊಳಗೆ ನಾಲ್ವರು ಪ್ರಯಾಣಿಕರಿದ್ದಾಗ ಈ ಘಟನೆ ಸಂಭವಿಸಿದೆ. ತಾಯಿ ಮತ್ತು ತಂದೆ ಅವರ ಇಬ್ಬರು ಮಕ್ಕಳೊಂದಿಗೆ, ಕಾರನ್ನು ತಳ್ಳಿ ಮಗುಚಿದ ನಂತರವು ತೃಪ್ತಿಗೊಳ್ಳದ ಆನೆ ಕಾರನ್ನು ದಾರಿಯಿಂದ ತಳ್ಳುತ್ತಲೇ ಇತ್ತು. ಸ್ವಲ್ಪ ಹೊತ್ತಿನ ನಂತರ ಶಾಂತಗೊಂಡ ಆನೆ ಸ್ಥಳದಿಂದ ತೆರಳಿತು. ವಿಡಿಯೋ ರೆಕಾರ್ಡ್ ಮಾಡಿದವರೇ ಅರಣ್ಯದ ರೇಂಜರ್ ಗಳಿಗೆ ಕರೆ ಮಾಡಿ ರಕ್ಷಿಸಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದ ಆ ಕುಟುಂಬದವರು, ಸಂಪೂರ್ಣವಾಗಿ ಭಯಭೀತರಾಗಿದ್ದರು. ಆನೆ ಹಿಂತಿರುಗಿ ಮತ್ತೆ ದಾಳಿ ಮಾಡುತ್ತದೆ ಎಂಬ ಭಯದಲ್ಲಿದ್ದರು. ಆನೆಯು ತನ್ನ ದಂತದಿಂದ ಕಾರಿನ ಬದಿಯನ್ನು ಚುಚ್ಚದಿರುವುದೆ ಅದೃಷ್ಟ. ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಕುಟುಂಬವನ್ನು ರಕ್ಷಿಸಿದ ರೇಂಜರ್ ಹೇಳಿದ್ದಾರೆ.