ಹೆಂಡತಿಯ ಧಾರ್ಮಿಕ ಆಚರಣೆ ಮತ್ತು ಉಪವಾಸಕ್ಕೆ ಬೇಸತ್ತ ಪತಿಯೊಬ್ಬ ಜೈಪುರದ ದೇವಸ್ಥಾನವೊಂದರಲ್ಲಿ ವಿಗ್ರಹವನ್ನು ಧ್ವಂಸಗೊಳಿಸಿದ ಅಮಾನವೀಯ ಘಟನೆ ನಡೆದಿದೆ. ಕಮಲೇಶ್ ಮೀನಾ ಎಂಬಾತ ತನ್ನ ಪತ್ನಿ ಹೆಚ್ಚಾಗಿ ಉಪವಾಸ ಮಾಡುತ್ತಾರೆಂಬ ಕಾರಣಕ್ಕೆ ಕೋಪಗೊಂಡು ಈ ಕೃತ್ಯ ಎಸಗಿದ್ದಾನೆ.
ಜೈಪುರದ ಪುನಾನ ಗ್ರಾಮದ ಮೀನಾ ಕಿ ಧನಿಯಲ್ಲಿ ಈ ಘಟನೆ ನಡೆದಿದೆ. ಕಮಲೇಶ್ ಮೀನಾ ಮತ್ತು ಮಖನ್ ಲಾಲ್ ಎಂಬ ಇಬ್ಬರು ಸೇರಿ ಕಾಲು ಬಾಬಾ ದೇವಸ್ಥಾನದಲ್ಲಿ ವಿಗ್ರಹವನ್ನು ಧ್ವಂಸ ಮಾಡಿದ್ದಾರೆ. ಈ ಪೈಕಿ ಕಮಲೇಶ್‌ನನ್ನು ಬಂಧಿಸಲಾಗಿದ್ದು, ಮಖನ್ ಲಾಲ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಕಮಲೇಶ್ ತನ್ನ ಕೃತ್ಯಕ್ಕೆ ಕಾರಣ ತಿಳಿಸಿದ್ದಾನೆ. ಹೆಂಡತಿ ಹೆಚ್ಚಾಗಿ ಉಪವಾಸ ಮಾಡುವುದರಿಂದ ತಮಗಿರುವ ವೈಯಕ್ತಿಕ ಸಂಬಂಧಕ್ಕೆ ತೊಂದರೆಯಾಗುತ್ತದೆ ಎಂದು ಆತ ಹೇಳಿಕೊಂಡಿದ್ದಾನೆ. ಅಲ್ಲದೆ, ತನ್ನ ಗೆಳೆಯ ಮಖನ್ ಸಿಂಗ್ ಕೂಡ ಹೆಂಡತಿಯ ಧಾರ್ಮಿಕತೆಯನ್ನು ಟೀಕಿಸಿದ್ದಾನೆಂದು ಕಮಲೇಶ್ ತಿಳಿಸಿದ್ದಾನೆ. ಇದರಿಂದ ಕುಪಿತಗೊಂಡ ಕಮಲೇಶ್ ತನ್ನ ಗೆಳೆಯನೊಂದಿಗೆ ಸೇರಿ ದೇವಸ್ಥಾನದಲ್ಲಿ ವಿಗ್ರಹವನ್ನು ಧ್ವಂಸಗೊಳಿಸಲು ನಿರ್ಧರಿಸಿದ್ದರು.
ಕಾಲು ಬಾಬಾ ದೇವಸ್ಥಾನವು ಬಹಳ ಪ್ರಸಿದ್ಧವಾಗಿದ್ದು, ಶುಕ್ರವಾರದಂದು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಫೆಬ್ರವರಿ 8 ರಂದು ರಾತ್ರಿ ಈ ಘಟನೆ ನಡೆದಿದೆ. ಕಾಮಲೇಶ್‌ನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.